ಸಂವಿಧಾನ ದಿನಾಚರಣೆಯನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಉದ್ಘಾಟಿಸಿದರು. ಕೆ.ರಾಮರಾಜನ್, ಆನಂದ್ ಪ್ರಕಾಶ್ ಮೀನಾ, ಶೇಖರ್, ಇತರರಿದ್ದರು. 
ಕೊಡಗು

ಸಂವಿಧಾನ ಪ್ರಜಾಪ್ರಭುತ್ವದ ಬೆನ್ನೆಲು

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ ಪ್ರಜಾಪ್ರಭುತ್ವದ ಬೆನ್ನೆಲು
  • ಸಂವಿಧಾನ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ
ಮಡಿಕೇರಿ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವು ಪ್ರಜಾಪ್ರಭುತ್ವದ ಬೆನ್ನೆಲುಬಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಸಂವಿಧಾನವು ಸ್ವಾತಂತ್ರ್ಯದ ರಕ್ಷಣೆಯಾಗಿದ್ದು, ಪ್ರತಿಯೊಬ್ಬರಲ್ಲೂ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಭಾರತೀಯ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿ ಹಿಡಿದಿದೆ. ಭಾರತೀಯರು ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯ ಎತ್ತಿ ಹಿಡಿಯಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಮುಂದಾಗಬೇಕು ಎಂದರು.
ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ಮೂಲಭೂತ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಪಾಲಿಸುವುದು ಅತೀ ಮುಖ್ಯವಾಗಿದೆ. ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಭಾರತ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ೧೯೪೬ರಲ್ಲಿ ಸ್ವಾತಂತ್ರ್ಯ ಭಾರತಕ್ಕೆ ಸಂವಿಧಾನ ರೂಪಿಸಲು ರಚನಾ ಸಭೆ ಸ್ಥಾಪನೆಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರೂಪಿಸಲಾಯಿತು. ಸಂವಿಧಾನ ರಚನಾ ಸಭೆಯು ೧೯೪೯ ರ ನ.೨೬ ರಂದು ಸಂವಿಧಾನವನ್ನು ಅಂಗೀಕರಿಸಿತು. ರಾಷ್ಟ್ರದಲ್ಲಿ ಸಂವಿಧಾನವು ೧೯೫೦ ರ ಜ.೨೬ ರಂದು ಜಾರಿಗೆ ಬಂದಿತು ಎಂದು ಹೇಳಿದರು.
ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಹೊಂದಿದ್ದು, ಹಲವು ದಾಖಲೆಗಳಿಗೆ ಪಾತ್ರವಾಗಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ಭಾರತ ಸಂವಿಧಾನದಲ್ಲಿರುವ ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು, ಸ್ವಾತಂತ್ರ್ಯ ಸಮಾನತೆ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದು ಕರೆ ನೀಡಿದರು.
ಸಂವಿಧಾನ ದಿನಾಚರಣೆ ಪ್ರಯುಕ್ತ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಥಮ ಬಹುಮಾನ ರೂ.೨೫ ಸಾವಿರ, ದ್ವಿತೀಯ ೧೫ ಸಾವಿರ ಮತ್ತು ತೃತೀಯ ೧೦ ಸಾವಿರವನ್ನು ಆರ್‌ಟಿಜಿಎಸ್ ಮೂಲಕ ನೀಡಲಾಯಿತು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ಮತ್ತು ತಂಡದವರು ನಾಡಗೀತೆ ಮತ್ತು ಸಂವಿಧಾನ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ತಹಶೀಲ್ದಾರ್ ಶ್ರೀಧರ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಚಾಲಕರಾದ ದಮಯಂತಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷ ದಿವಾಕರ, ಪ್ರಮುಖರಾದ ಕುಮಾರ, ಸಿದ್ದೇಶ್, ಚಂದನ್, ಇತರರು ಇದ್ದರು.
ಗಮನ ಸೆಳೆದ ಜಾಥಾ
ಭಾರತ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಿಂದ ಗಾಂಧಿ ಭವನದವರೆಗೆ ಜಾಥಾ ನಡೆಯಿತು. ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಗಾಂಧಿ ಮೈದಾನದಲ್ಲಿ ಜಾಥಾಗೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಚಾಲನೆ ನೀಡಿದರು. ಜಾಥದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳು ಕುಣಿತ ಕಾರ್ಯಕ್ರಮ ಜರುಗಿತು. ಹಾಗೆಯೇ ಜಾಥಾ ವಾಹನದಲ್ಲಿ ವಿದ್ಯಾರ್ಥಿಯೊಬ್ಬರು ಅಂಬೇಡ್ಕರ್ ವೇಷ ಧರಿಸಿ ಸಂವಿಧಾನ ಪುಸ್ತಕ ಹಿಡಿದು ಕೈ ತೋರಿಸುತ್ತಿದ್ದ ದೃಶ್ಯ ಮನ ಸೆಳೆಯಿತು.
ವಿವಿಧ ಶಾಲಾ-ಕಾಲೇಜಿನ ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಕುರಿತ ಘೋಷವಾಕ್ಯ ಪ್ರದರ್ಶನ ಗಮನ ಸೆಳೆಯಿತು. ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರು, ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನಗರಸಭೆ ಸದಸ್ಯರಾದ ಸತೀಶ್, ಪ್ರಮುಖರಾದ ದಿವಾಕರ, ಕುಮಾರ, ಸಿದ್ದೇಶ್, ಚಂದನ್ ಇತರರು ಇದ್ದರು.