ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ಸಹಯೋಗದಲ್ಲಿ ಕುಶಾಲನಗರ ಕೊಪ್ಪ ಗಡಿ ಭಾಗದ ಪ್ರೆಶರ್ಪೆಟೆ ಸೇತುವೆ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಆಯೋಜಿಸಲಾಗಿತ್ತು. ಬಾಚಣಿಯಂಡ ಅಪ್ಪಣ್ಣ, ಭಜನ್ ಬೋಪಣ್ಣ, ಮನುಪೆಮ್ಮಯ್ಯ ಇತರರಿದ್ದರು.
- ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಮಾಹಿತಿ
- ವಿದ್ಯಾರ್ಥಿಗಳೊಂದಿಗೆ ಸಂವಾದ
ಕುಶಾಲನಗರ: ತಾಲೂಕಿನ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ವೃಕ್ಷಮಾತೆ ಡಾ.ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ತಿಳಿಸಿದರು.
ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ಸಹಯೋಗದಲ್ಲಿ ಕುಶಾಲನಗರ ಕೊಪ್ಪ ಗಡಿ ಭಾಗದ ಪ್ರೆಶರ್ಪೆಟೆ ಸೇತುವೆ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಲುಮರದ ತಿಮ್ಮಕ್ಕ ಅವರ 115ನೇ ಜನ್ಮದಿನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಪರಿಸರ ಮಾಹಿತಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಶಾಸಕರ ಅನುದಾನ ಮತ್ತು ಇಲಾಖೆಯ ಮೂಲಕ ವೃಕ್ಷಮಾತೆ ಸಾಲುಮರ ತಿಮ್ಮಕ್ಕ ಅವರ ಹೆಸರಿನಲ್ಲಿ ಉದ್ಯಾನ ನಿರ್ಮಿಸಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ಉತ್ತಮ ಪರಿಸರದ ಕಾಳಜಿ ಹೊಂದಬೇಕು ಎಂದರು.
ಪರಿಸರ ತಜ್ಞ ಭಜನ್ ಬೋಪಣ್ಣ ಮಾತನಾಡಿ, ಪ್ರಕೃತಿಯಲ್ಲಿ ಅಗಾಧ ಶಕ್ತಿ ಅಡಗಿದೆ. ಆರಾಧನೆ ಮೂಲಕ ಶಕ್ತಿ ಗಳಿಸಲು ಸಾಧ್ಯ. ನದಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕಿದೆ. ಯಾವುದೇ ಸಂದರ್ಭದಲ್ಲಿ ಪ್ರಕೃತಿಯ ನಾಶ ಸಲ್ಲದು. ಪ್ರತಿಯೊಂದು ಮರ- ಗಿಡಕ್ಕೆ ಚಲನೆ ಮತ್ತು ಶಕ್ತಿ ಇದೆ. ಪ್ರಕೃತಿ ಮೂಲಕ ತಮ್ಮ ಜೀವನವನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರ ಸಾಧನೆ ಮತ್ತು ಅವರಿಗೆ ಲಭಿಸಿದ ಗೌರವ ಬಗ್ಗೆ ಸಾಲುಮರದ ತಿಮ್ಮಕ್ಕ ಫೌಂಡೇಷನ್ ಪ್ರಶಸ್ತಿಗೆ ಭಾಜನರಾದ ಪರಿಸರ ಬಳಗದ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾಹಿತಿ ನೀಡಿದರು.
ಇಂಡಿಯನ್ ಮೋಗ್ಲಿ ಖ್ಯಾತಿಯ ಪುಟ್ಟ ಬಾಲಕ ವಿಯಾನ್ ಬೋಪಣ್ಣ ಅವರು ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಮಾಹಿತಿ ಉಳ್ಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.
ಉದ್ಯಮಿ ಹಾಗೂ ರೋಟರಿ ಕ್ಲಬ್ ನಿರ್ಗಮಿತ ಅಧ್ಯಕ್ಷ ಮನು ಪೆಮ್ಮಯ್ಯ, ಭಾರತ ಮಾತಾ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ಫಾ.ಪ್ರದೀಶ್, ಉದ್ಯಮಿ ಮನುಪೆಮ್ಮಯ್ಯ, ಪರಿಸರ ತಜ್ಞರಾದ ಭಜನ್ ಬೋಪಣ್ಣ ದಂಪತಿಯನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯರು ಹಾಗೂ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚಣಿಯಂಡ ಅಪ್ಪಣ್ಣ, ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮಂಡೆಪಂಡ ಬೋಸ್ ಮೊಣ್ಣಪ್ಪ, ಭೋಜನ ರೆಡ್ಡಿ, ಕಾರ್ಯಕ್ರಮ ಆಯೋಜಕರಾದ ವನಿತಾ ಚಂದ್ರಮೋಹನ್, ಪ್ರಮುಖರಾದ ಧರಣಿ ಸೋಮಯ್ಯ, ಕೊಪ್ಪ ಭಾರತಮಾತ ಪದವಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.