ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ದಂಡೆಯಲ್ಲಿ ಭಾನುವಾರ ಹುಣ್ಣಿಮೆಯ ಅಂಗವಾಗಿ ನಡೆದ ಗಂಗಾರತಿ . ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ, ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ , ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 
ಕೊಡಗು

ಕಾವೇರಿ ನದಿ ಸಂರಕ್ಷಣೆ ಜನಸಮುದಾಯದ ಹೊಣೆ

ಪ್ರಮುಖ ಮುಖ್ಯಾಂಶಗಳು

  • ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಕರೆ
ಕುಶಾಲನಗರ: ಜೀವಕೋಟಿಯನ್ನು ಸಲಹುವ ಸಂಜೀವಿನಿ ಕಾವೇರಿ ನದಿಯ ಸಂರಕ್ಷಣೆ ನಾಡಿನ ಪ್ರತಿಯೊಂದು ಜನಸಮುದಾಯದ ಹೊಣೆಯಾಗುವ ಮೂಲಕ ಗಂಗಾಜಲವನ್ನು ಪೂಜನೀಯವಾಗಿಸಬೇಕು ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಕರೆ ನೀಡಿದರು.
ಕುಶಾಲನಗರದ ಕಾವೇರಿ ಮಹಾ ಆರತಿ ಬಳಗ ಹಾಗೂ ಸ್ಥಳೀಯ ವೀರಶೈವ ಸಮಾಜದ ವತಿಯಿಂದ ನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿ ದಂಡೆಯಲ್ಲಿ ಭಾನುವಾರ ಹುಣ್ಣಿಮೆಯ ಅಂಗವಾಗಿ ನಡೆದ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾವೇರಿ ಜೀವಜಲಕ್ಕೆ ಮನುಷ್ಯನ ಹಸ್ತಕ್ಷೇಪ ಇಲ್ಲದೇ ಹೋದಲ್ಲಿ ನದಿಯ ಅಸ್ತಿತ್ವವೂ ಉಳಿಯುತ್ತದೆ ಹಾಗೂ ಸ್ವಚ್ಛಂದವಾಗಿಯೂ ಹರಿಯುತ್ತದೆ ಎಂದು ಶ್ರೀಗಳು ಆಶಿಸಿದರು.
ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಮಾತನಾಡಿ, ಕುಶಾಲನಗರದಲ್ಲಿ ಹರಿಯುತ್ತಿರುವ ಕಾವೇರಿ ನದಿಯ ಪರಿಸರ ಇಂದು ಒಂದಷ್ಟು ಸ್ವಚ್ಛಂದವಾಗಿ ಇದೆ ಎಂದಾದರೆ ಅದು ಸಾಮಾಜಿಕ ಚಿಂತನೆಯ ನದಿ ಉಳಿವಿನ ಹೋರಾಟಗಾರ ಚಂದ್ರಮೋಹನ್ ಅವರ ಶ್ರಮದ ಫಲ. ಹಾಗಾಗಿ ನದಿಗೆ ಯಾರೂ ಕೂಡ ತ್ಯಾಜ್ಯ ಬಿಸಾಡದಂತೆ ಕರೆ ಕೊಟ್ಟರು.
ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ನದಿಯ ದಂಡೆಗೆ ಕಾಲಿಡದಷ್ಟು ಕೊಳಚೆಯಾಗಿದ್ದ ನದಿ ಪರಿಸರ ಸ್ವಚ್ಛತೆಗೆ ಕಳೆದ ಎರಡು ದಶಕಗಳಿಂದಲೂ ನಿರಂತರ ಶ್ರಮ ವಹಿಸಿ ಒಂದಷ್ಟು ಸ್ವಚ್ಛತೆ ಹಾಗೂ ಪೂಜ್ಯತಾ ಭಾವನೆ ಮೂಡಿಸಲಾಗುತ್ತಿದೆ. ಬೊಗಸೆಯಿಂದ ಕುಡಿಯಲು ಯೋಗ್ಯವಾಗಿದ್ದ ಕಾವೇರಿ ನೀರು ಇಂದು ಕಲುಷಿತಗೊಳ್ಳದಂತೆ ಕಾಪಾಡಲೂ ಎಲ್ಲರ ಸಹಕಾರ ಅಗತ್ಯ ಎಂದರು.
ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಸಾಂಬಶಿವಯ್ಯ, ಉಪಾಧ್ಯಕ್ಷ ಹೆಚ್.ಪಿ. ಉದಯಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕುಶಾಲನಗರ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ಎಂ.ಮಧುಸೂದನ್, ಕಾರ್ಯದರ್ಶಿ ಶುಭಶೇಖರ್, ಕುಶಾಲನಗರ ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಮಾಜಿ ಅಧ್ಯಕ್ಷೆ ವಿಜಯಪಾಲಾಕ್ಷ, ಸರೋಜಾ ಆರಾಧ್ಯ, ಡಾ.ದೀಪಿಕಾ, ವೇದಾವತಿ, ನಿವೃತ್ತ ಪ್ರಾಂಶುಪಾಲ ಕೆಂಚಪ್ಪ, ಉಪನ್ಯಾಸಕ ಪರಮೇಶ್, ಗಣೇಶ್, ವಿರೂಪಾಕ್ಷ, ಹೇಮಲತಾ ಮತ್ತಿತರರಿದ್ದರು.