ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದಲ್ಲಿ ಕಾಡಾನೆ ದಾಂಧಲೆಯಿಂದ ಮನೆ ಹಾಗೂ ವಾಹನಗಳಿಗೆ ಹಾನಿಯಾಗಿರುವುದು.
ಸೋಮವಾರಪೇಟೆ: ತಾಲೂಕಿನ ತಾಕೇರಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ಕಾಡಾನೆಯೊಂದು ಜನವಸತಿ ಪ್ರದೇಶಕ್ಕೆ ನುಗ್ಗಿ ದಾಂಧಲೆ ನಡೆಸಿ ಮನೆ ಹಾಗೂ ವಾಹನಗಳಿಗೆ ಹಾನಿ ಮಾಡಿದೆ.
ಗ್ರಾಮದ ನಾರಾಯಣ ಎಂಬುವರ ಮನೆ ಮುಂಭಾಗದಲ್ಲಿದ್ದ ಶೀಟ್‌ಗಳು, ಶಿವಪ್ರಸಾದ್ ಎಂಬುವರ ಮನೆಯ ಕಾಂಪೌಂಡ್ ಜಖಂಗೊಳಿಸಿದೆ. ಕೆ.ಪಿ.ರಾಜು ಎಂಬುವರ ಪುತ್ರ ಅನೂಪ್ ಅವರಿಗೆ ಸೇರಿದ ಕಾರನ್ನು ಹಾನಿಗೊಳಿಸಿದೆ. ಬೆಳಗ್ಗೆ 3 ಗಂಟೆ ಸುಮಾರಿಗೆ ಗ್ರಾಮದ ಜನವಸತಿ ಪ್ರದೇಶದಲ್ಲಿ ಸಂಚರಿಸಿದ ಕಾಡಾನೆ, ಮನೆಗಳ ಸುತ್ತ ಓಡಾಡುತ್ತಾ ದಾಂಧಲೆ ನಡೆಸಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ನಿರ್ಮಾಣವಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲ ದಿನಗಳಿಂದ ಸೂರ್ಲಬ್ಬಿ ಭಾಗದಲ್ಲಿ 5 ಕಾಡಾನೆಗಳು ಸಂಚರಿಸುತ್ತಿದ್ದು, ಅದೇ ಗುಂಪಿನಿಂದ ಬೇರ್ಪಟ್ಟ ಆನೆಯೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿರಬಹುದು ಎನ್ನಲಾಗಿದೆ.