ಸುಂಟಿಕೊಪ್ಪ ಸಮೀಪದ ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ನಾಕೂರು ಶಿರಂಗಾಲ ಗ್ರಾಪಂನ ಗ್ರಾಮಸಭೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿದರು. ಬಿ.ಇ.ಸತೀಶ್, ಬಿ.ಜಿ. ರಮೇಶ್, ಎ.ಎಂ.ಕೊಳೆಂಬೆ ಸುಭಾಷ್, ರಾಧಾ ಮಣಿ, ಸೀತೆ, ಪ್ರೇಮಾ ಮತ್ತು ಅರುಣಾಕುಮಾರಿ, ಆಸ್ಮಾ ಇತರರು ಇದ್ದರು.
ಸುಂಟಿಕೊಪ್ಪ: ನಾಕೂರು ಶಿರಂಗಾಲ ಗ್ರಾಪಂನಲ್ಲಿ ಈ ಹಿಂದಿನ ಪಿಡಿಒ ಅವರ ಕರ್ತವ್ಯಾವಧಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ದೂರು ನೀಡುವಂತೆ ಗ್ರಾಮ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಕಾನ್‌ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮ ಸಭೆಯಲ್ಲಿ ಅವ್ಯವಹಾರದ ಸಂಬಂಧ ತೀವ್ರ ಚರ್ಚೆ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನಾ ವರದಿ ಹಾಗೂ ದಾಖಲಾತಿ ಪರಿಶೀಲನೆ ವೇಳೆ ಅವ್ಯವಹಾರ ಪತ್ತೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಹೇಳಿದರು.
ವಸತಿ ಯೋಜನೆಗೆ ಸಂಬಂಧಿಸಿದಂತೆ ಬಡ ಫಲಾನುಭವಿಗಳಿಂದ ಹಣ ಪಡೆದಿರುವುದು, ವಿವಿಧ ಕೆಲಸ ಕಾರ್ಯಗಳಿಗೆ ಹಣಪಡೆದು ವಂಚಿಸಲಾಗಿದೆ ಎಂದು ಗ್ರಾಮಸ್ಥರು ಸಭೆಯಲ್ಲಿ ಆರೋಪಗಳ ಸುರಿಮಳೆಗೈದರು.
ಇದೇ ಸಂದರ್ಭದಲ್ಲಿ ಗ್ರಾಮ ಸಭೆಯಲ್ಲಿ ರಸ್ತೆ ಚರಂಡಿ ಕುಡಿಯುವ ನೀರು ವಸತಿ ಯೋಜನೆ ಹಾಗೂ ಒತ್ತುವರಿ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿ ಆಕ್ರೋಶ ತೋಡಿಕೊಂಡರು.
ಎಮ್ಮೆಗುಂಡಿ ರಸ್ತೆ ಒತ್ತುವರಿಯಾಗಿದೆ, ಲ್ಯಾಂಡ್ ಆರ್ಮಿ ವತಿಯಿಂದ ನಿರ್ಮಿಸಿರುವ ರಸ್ತೆ ಕಳಪೆ ಗುಣಮಟ್ಟದಿಂದ ಕೂಡಿರುವುದು, ರಸ್ತೆ ಬದಿ ವಾಹನಗಳನ್ನು ನಿಲ್ಲಿಸುತ್ತಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಅನಾವರಣಗೊಳಿಸಿದರು.
ನಾಕೂರು ಶಿರಂಗಾಲ ಗ್ರಾಮವು ಹಾರಂಗಿ ಹಿನ್ನೀರಿನ ಪ್ರದೇಶವಾಗಿದ್ದು, ಇಲ್ಲಿ ಸಾಕಷ್ಟು ಅವಘಡಗಳು ನಡೆಯುತ್ತಿವೆ. ಇದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಇಲಾಖೆಗಳು ಹಾಗೂ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು. ಅಲ್ಲದೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಗೆ ಈ ಮೂಲಕ ಆದಾಯ ಕ್ರೋಡೀಕರಿಸಲೂ ಅವಕಾಶವಿದೆ. ಇದರಿಂದ ಅವಘಡಗಳನ್ನೂ ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಗ್ರಾಮಸ್ಥರು ಸಲಹೆ ನೀಡಿದರು.
ಕುಡಿಯುವ ನೀರಿಲ್ಲ: ಗ್ರಾಮ ಪಂಚಾಯಿತಿ ವತಿಯಿಂದ ನಾಕೂರು ಶಿರಂಗಾಲ ಗ್ರಾಮಕ್ಕೆ ಕನಿಷ್ಠ 3 ದಿನಕ್ಕೊಮ್ಮೆಯಾದರೂ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ಆಳಲು ತೋಡಿಕೊಂಡರು.
ಗ್ರಾಮಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಕಾನ್‌ಬೈಲ್ ಸರ್ಕಾರಿ ಮುಖ್ಯಶಿಕ್ಷಕ ಮೂರ್ತಿ ಪಾಲ್ಗೊಂಡಿದ್ದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‌ರಾಜ್ ಮಾತನಾಡಿ, ಗ್ರಾಮದಲ್ಲಿ ಆಗಿಂದಾಗ್ಗೆ ಪ್ರವಾಸಿಗರು ಜಲ ಅವಘಡಗಳಿಗೆ ತುತ್ತಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನಹರಿಸಬೇಕು. ಹಾರಂಗಿ ಹಿನ್ನೀರಿನ ಪ್ರದೇಶಕ್ಕೆ ತೆರಳದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರಾಮಸ್ಥರಾದ ಶಾಂತಪ್ಪ, ಪಿ.ಎಂ.ಬಿಜು, ರಾಮಯ್ಯ, ಗಣೇಶ್ ಇತರರು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಬಿ.ಇ.ಸತೀಶ್, ರಮೇಶ್, ಎ.ಎಂ. ಕೊಳೆಂಬೆ ಸುಭಾಷ್, ರಾಧಾ ಮಣಿ, ಸೀತೆ, ಪ್ರೇಮಾ ಮತ್ತು ಅರುಣಾಕುಮಾರಿ, ಪಿಡಿಒ ಅಸ್ಮಾ ಇತರರು ಇದ್ದರು.