ಸುಸ್ಥಿರ ಸಹಬಾಳ್ವೆಗಾಗಿ ಅರಣ್ಯಗಳು ಎಂಬ ಧ್ಯೇಯದೊಂದಿಗೆ ಕುಶಾಲನಗರ ಕಾವೇರಿ ನಿಸರ್ಗಧಾಮದಲ್ಲಿ ಆಯೋಜಿಸಲಾಗಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಆನೆಗಳ ಲೋಕ ಹಾಗೂ ಮಾನವ-ಆನೆ ಸಹಬಾಳ್ವೆ ಕುರಿತು ಮಾಹಿತಿ ನೀಡುವ ವಿಶೇಷ ಕೈಪಿಡಿ ಬಿಡುಗಡೆ ಮಾಡಲಾಯಿತು. üಸೋನಾಲ್ ವೃಷ್ಠಿ, ಆರ್.ಎನ್. ಬಿಂದುಮಣಿ, ಡಾ. ಚೆಟ್ಟಿಯಪ್ಪ, ಡಾ. ಮುಜೀಬ್ ಇದ್ದರು.
ಆನೆ ಮತ್ತು ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆಗೆ ಸಮುದಾಯದ ಸಹಭಾಗಿತ್ವ ಅತ್ಯಗತ್ಯವಾಗಿದ್ದು ಆನೆಗಳು ಕೇವಲ ಅರಣ್ಯ ಇಲಾಖೆಗೆ ಸೇರಿದವುಗಳಲ್ಲ, ಸಮಾಜದ ಪ್ರತಿಯೊಬ್ಬರಿಗೂ ಸೇರಿದವು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಠಿ ಹೇಳಿದರು. ಕರ್ನಾಟಕ ಅರಣ್ಯ ಇಲಾಖೆ ಹಾಗೂ ಕೊಡಗು ಅರಣ್ಯ ವೃತ್ತದ ವತಿಯಿಂದ ವನ್ಯಜೀವಿ ವಿಭಾಗ, ವಿವಿಧ ಅರಣ್ಯ ವಿಭಾಗಗಳು ಮತ್ತು ತಾಲೂಕು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ಬುಧವಾರ ಸುಸ್ಥಿರ ಸಹಬಾಳ್ವೆಗಾಗಿ ಅರಣ್ಯಗಳು ಎಂಬ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆನೆಗಳು ಪ್ರಕೃತಿಯೊಂದಿಗೆ ಅವಿನಾಭಾವ ಸಂಬAಧ ಹೊಂದಿದ್ದು, ಜೀವ ವೈವಿಧ್ಯ ವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಆನೆಗಳು ದೂರದಿಂದಲೇ ಕುಡಿಯುವ ನೀರು ಮತ್ತು ಮನುಷ್ಯರ ಇರುವಿಕೆಯನ್ನು ಗ್ರಹಿಸುವ ಅದ್ಭುತ ವಾಸನೆ ಶಕ್ತಿ ಹೊಂದಿವೆ. ಇವುಗಳ ಜೀವನ ಶೈಲಿ ಮತ್ತು ಪರಿಸರ ವ್ಯವಸ್ಥೆಯಲ್ಲಿ ಇವುಗಳ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾನವ-ಆನೆ ಸಂಘರ್ಷ ನಿಯಂತ್ರಿಸಲು ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಆನೆಗಳು ದೈತ್ಯಾಕಾರವಾಗಿದ್ದರೂ ಅತ್ಯಂತ ಸೂಕ್ಷ್ಮಮತಿಯಾಗಿವೆ. ಮನುಷ್ಯನ ದುರಾಸೆಯಿಂದಾಗುತ್ತಿರುವ ಅರಣ್ಯ ನಾಶವೇ ಆನೆಗಳ ಸ್ವೇಚ್ಛಾ ವಿಹಾರ ಹಾಗೂ ಮಾನವ-ಆನೆ ಸಂಘರ್ಷಕ್ಕೆ ಮೂಲ ಕಾರಣ. ಪರಿಸರ ಮತ್ತು ವನ್ಯಜೀವಿಗಳನ್ನು ರಕ್ಷಿಸುವ ಹೊಣೆ ಕೇವಲ ಇಲಾಖೆಯದ್ದಲ್ಲ, ಸಾರ್ವಜನಿಕರೂ ಈ ಜವಾಬ್ದಾರಿಯನ್ನು ಹೊರಬೇಕು ಎಂದರು.
ಮಡಿಕೇರಿ ಡಿಸಿಎಫ್ ಸೆಂದಿಲ್ ಕುಮಾರ್, ಸೋಮವಾರಪೇಟೆ ವಲಯ ಎಸಿಎಫ್ ನವೀನ್ ಕುಮಾರ್, ಆನೆ ಡಾಕ್ಟರ್ ಎಂದೇ ಪ್ರಸಿದ್ಧರಾದ ಡಾ. ಚಿಟ್ಟಿಯಪ್ಪ, ಡಾ. ಮುಜೀಬ್, ಜ್ಞಾನಗಂಗಾ ವಿದ್ಯಾ ಸಂಸ್ಥೆಯ ನಿಂಗಪ್ಪ, ಪರಿಸರ ಪ್ರಶಸ್ತಿ ಪುರಸ್ಕೃತ ಟಿ.ಜಿ. ಪ್ರೇಮ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ತಿಮ್ಮಯ್ಯ, ಭುವನೇಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ಶಾಲಾ ಶಿಕ್ಷಕಿ ಶೈಲಾ ಪ್ರೇಮ್ ಕುಮಾರ್ ಮತ್ತಿತರರು ಇದ್ದರು.
ಆನೆಗಳ ಲೋಕ ಹಾಗೂ ಮಾನವ-ಆನೆ ಸಹಬಾಳ್ವೆ ಕುರಿತು ಮಾಹಿತಿ ನೀಡುವ ವಿಶೇಷ ಕೈಪಿಡಿ ಮತ್ತು ಆನೆ ಪೋಸ್ಟರ್ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಅರಣ್ಯ ಇಲಾಖೆಯಿಂದ ಆನೆಗಳ ವಿವಿಧ ವಿನ್ಯಾಸದ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು. ಜತೆಗೆ ಆನೆಗಳನ್ನು ಸೆರೆ ಹಿಡಿಯಲು ಬಳಸುವ ಭಾರಿ ಗಾತ್ರದ ಹಗ್ಗ, ಸರಪಳಿ, ರೇಡಿಯೋ ಕಾಲರ್, ಎ.ಐ. ಕ್ಯಾಮೆರಾ ಮುಂತಾದ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿತ್ತು.
ಕುಶಾಲನಗರ ಎಂಜಿನಿಯರಿAಗ್ ಕಾಲೇಜಿನಿಂದ ಕಾವೇರಿ ನಿಸರ್ಗಧಾಮದವರೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಹಕಾರದೊಂದಿಗೆ ಪರಿಸರ ಸಂರಕ್ಷಣೆಯ ನಾಮಫಲಕಗಳನ್ನು ಹಿಡಿದು ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅರಣ್ಯ ಸಂರಕ್ಷಣೆಯಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಹಾಗೂ ಕಾಡಾನೆಗಳ ದಾಳಿ ಸಂದರ್ಭದಲ್ಲಿ ಇಲಾಖೆಗೆ ಸಹಕರಿಸಿದ ಪರಿಸರ ಪ್ರೇಮಿ ನಾಗರಿಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಮತ್ತೊಂದು ಕಡೆ ಹಾರಂಗಿ ಸಾಕಾನೆ ಶಿಬಿರದಲ್ಲೂ ಸರಣವಾಗಿ ವಿಶ್ವ ಆನೆ ದಿನ ಆಚರಿಸಲಾಯಿತು.