ಬಿಲ್ಲವ ಸಮಾಜ ನಾಪೋಕ್ಲುವಿನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮದಲ್ಲಿ ಸಂಘದ ನಿವೃತ ಯೋಧರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು. ಬಿ.ಕೆ.ಮೋಹನ್, ಬಿ.ಎಂ.ಪ್ರತೀಪ್ ಇತರರಿದ್ದರು.
ನಾಪೋಕ್ಲು: ಬಿಲ್ಲವ ಸಮಾಜ ನಾಪೋಕ್ಲು ವತಿಯಿಂದ ಸಮಾಜದ ಕಚೇರಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಸಂಘದ ನಿವೃತ ಯೋಧರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಿಲ್ಲವ ಸಂಘದ ನಿವೃತ್ತ ಯೋಧರಾದ ಕೊರಗಪ್ಪ ಪೂಜಾರಿ, ವಿಠಲ ಬಿ.ಬಿ.ಧನಂಜಯ, ಬಿ.ಬಿ.ಅರುಣ, ನವೀನ್ ಅವರು ಗೌರವ ಸ್ವೀಕರಿಸಿ ಕಾರ್ಗಿಲ್ ಯುದ್ಧದ ಸಂಧರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಕ್ಷಣಗಳು, ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಂತಹ ಅನೇಕ ವೀರ ಯೋಧರ ಸಾಹಸ, ಸೇನೆಯಲ್ಲಿ ಕಳೆದ ಕ್ಷಣಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಅತಿಥಿಯಾಗಿ ಆಗಮಿಸಿದ್ದ ಸಂಘದ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಾರ್ಗಿಲ್ ಯುದ್ಧದ ನಂತರ ಕಾರ್ಗಿಲ್ ಆಪರೇಷನ್ ನಲ್ಲಿ ಮಡಿದ ಸಮಾಜದ ಬಾಂಧವರಾದ ಬಿ.ಎಂ.ದೇವಪ್ಪ ಅವರ ಬಲಿದಾನವನ್ನು ಸ್ಮರಿಸಿದರು.
ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧರನ್ನು ಸನ್ಮಾನಿಸಿ ಮಾತನಾಡಿದ ಸಂಘದ ಅಧ್ಯಕ್ಷರು ಹಾಗೂ ಕಾರ್ಗಿಲ್ ಆಪರೇಷನ್ ಸಮಯದಲ್ಲಿ ಹುತಾತ್ಮರಾದ ಬಿ.ಎಂ.ದೇವಪ್ಪ ಅವರ ಸಹೋದರ ಬಿ.ಎಂ.ಪ್ರತೀಪ್ ಮಾತನಾಡಿ, ಸಹೋದರ ಬಿ.ಎಂ.ದೇವಪ್ಪ ಸೇನೆಯಲ್ಲಿ ತೋರಿದ ಧೈರ್ಯ, ಸಾಹಸವನ್ನು ನೆನೆಯುತ್ತಾ ಸಹೋದರ ಕಳುಹಿಸಿದ ಅಂಚೆ ಪತ್ರಗಳನ್ನು ನೆನೆಯುತ್ತ ಭಾವುಕರಾಗಿ ಮುಂದಿನ ದಿನಗಳಲ್ಲಿ ಸೈನ್ಯದಲ್ಲಿದ ಪ್ರತಿಯೊಬ್ಬರನ್ನೂ ಗೌರವಿಸುವ ಕಾರ್ಯ ಸಂಘದಿಂದ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಕುಮಾರಿ. ಪ್ರಜ್ಞಾ, ಕು.ಹರ್ಷ, ಕು.ಡಿಸಾಂತ್, ಕು.ಯಶು ಅವರು ಕಾರ್ಗಿಲ್ ವಿಜಯದ ಬಗ್ಗೆ ಭಾಷಣ ಮಾಡಿ, ದೇಶ ಭಕ್ತಿಗೀತೆ ಹಾಡಿದರು.
ಅಂತಿಮವಾಗಿ ಸೇನೆಯಲ್ಲಿ ಮಡಿದ ನಾಪೋಕ್ಲು ಗ್ರಾಮದ ಬಿ.ಎಂ.ದೇವಪ್ಪ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ, ಸಲಹಾ ಮಂಡಳಿ ಸಂಘದ ಹಿರಿಯ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.