ಮಾಂದಲಪಟ್ಟಿಯ ಪ್ರಾಕೃತಿಕ ಸೌಂದರ್ಯ
ಯೋಗರಾಜ ಭಟ್ಟರ ಗಾಳಿಪಟ ಸಿನಿಮಾದ ಮೂಲಕ ಮುಗಿಲ್‌ಪೇಟೆ ಎಂದೇ ಪ್ರಸಿದ್ಧವಾಗಿರುವ ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿ ಕೊನೆಗೂ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿದೆ. ರಸ್ತೆ ದುರಸ್ತಿಯ ಕಾರಣದಿಂದ ನಾಲ್ಕು ತಿಂಗಳ ಕಾಲ ಇಲ್ಲಿಗೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಇದೀಗ 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಬೈಕ್‌ಗಳ ಮೂಲಕವೂ ಸುಲಭವಾಗಿ ತಲುಪಬಹುದಾಗಿದೆ.
ಸಂಪೂರ್ಣ ಹದಗೆಟ್ಟು ಕೇವಲ ಜೀಪ್‌ಗಳು ಮಾತ್ರ ಸಂಚರಿಸಬಹುದಾದ ಸ್ಥಿತಿ ತಲುಪಿದ್ದ ಮಾಂದಲಪಟ್ಟಿ ರಸ್ತೆಯನ್ನು ಇದೀಗ ಸರಿಪಡಿಸಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ಪ್ರವಾಸಿಗರ ಭೇಟಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಳಾಗಿದ್ದ ರಸ್ತೆಯನ್ನು ಅರಣ್ಯ ಇಲಾಖೆ ಮೂಲಕ ಸರಿಪಡಿಸುವ ಕೆಲಸ ಮಾಡಲಾಗಿದ್ದು ಸ್ಟೋನ್ ಪಿಚಿಂಗ್ ರಸ್ತೆ ಮಾಡುವ ಮೂಲಕ ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುವುಗೊಳಿಸಲಾಗಿದೆ. ರಸ್ತೆ ದುರಸ್ತಿಯ ಕಾರಣಕ್ಕೆ ಪ್ರವಾಸಿ ಸೀಸನ್‌ನಲ್ಲೇ 4 ತಿಂಗಳ ಕಾಲ ಮಾಂದಲಪಟ್ಟಿ ಬಂದ್ ಮಾಡಲಾಗಿತ್ತು.
ಮಾಂದಲಪಟ್ಟಿ ಪ್ರವೇಶ ದ್ವಾರದಿಂದ ವೀಕ್ಷಣಾ ಸ್ಥಳದ ತನಕ ಸುಮಾರು 3.5 ಕಿಮೀ ಅಂತರದ ಪೈಕಿ 700 ಮೀ. ದೂರದ ವರೆಗೆ ಕಲ್ಲಿನ ನೆಲಹಾಸು ನಿರ್ಮಿಸಲಾಗಿದೆ. ಉಳಿದೆಡೆ ಇದ್ದ ಆಳವಾದ ಗುಂಡಿಗಳು, ಏರು-ತಗ್ಗುಗಳನ್ನು ಸಮತಟ್ಟು ಮಾಡಲಾಗಿದೆ. ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾಳಾಗದಂತೆ ತಡೆಯಲು ಮಳೆನೀರು ಚರಂಡಿಗಳನ್ನು ನಿರ್ಮಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶ ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಬರುವುದರಿಂದ ಇಲ್ಲಿ ಯಂತ್ರಗಳನ್ನು ಬಳಸದೇ ಮಾನವ ಶ್ರಮದಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸಿರುವುದು ವಿಶೇಷ.
ದೇಶದ ಪ್ರಮುಖ ಪ್ರವಾಸಿ ತಾಣವಾಗಿ ಕೊಡಗು ಗುರುತಿಸಿಕೊಂಡಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಮಾಂದಲಪಟ್ಟಿಗೆ ಭೇಟಿ ನೀಡದಿದ್ದರೆ ತಮ್ಮ ಪ್ರವಾಸ ಅಪೂರ್ಣ ಎಂದೇ ಭಾವಿಸುತ್ತಾರೆ. ಮಡಿಕೇರಿಯಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಮಾಂದಲಪಟ್ಟಿ ಸಮುದ್ರಮಟ್ಟದಿಂದ ಅಂದಾಜು 4 ಸಾವಿರ ಅಡಿ ಎತ್ತರದಲ್ಲಿದೆ. ಹಟ್ಟಿಹೊಳೆ - ಮುಕ್ಕೋಡ್ಲು - ತಂತಿಪಾಲ, ಮಕ್ಕಂದೂರು - ತಂತಿಪಾಲ, ಮಡಿಕೇರಿ-ಹೆಬ್ಬೆಟ್ಟಗೇರಿ-ದೇವಸ್ತೂರು, ಮಡಿಕೇರಿ-ಕೆ.ನಿಡುಗಣೆ-ಕಾಲೂರು ಹೀಗೆ ನಾಲ್ಕು ಮಾರ್ಗಗಳಿಂದ ಮಾಂದಲಪಟ್ಟಿಗೆ ತೆರಳಬಹುದು. ಯಾವ ರಸ್ತೆಯಲ್ಲಿ ಹೋದರೂ ದಾರಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಅವಕಾಶ ಪ್ರವಾಸಿಗರಿಗೆ ಸಿಗುತ್ತದೆ. 2018ರ ಪ್ರಾಕೃತಿಕ ದುರಂತದ ವೇಳೆ ಗುಡ್ಡ ಕುಸಿದು ಆಗಿರುವ ಭೀಕರ ಅನಾಹುತದ ಕುರುಹುಗಳೂ ಕಾಣಲು ಸಿಗುತ್ತದೆ.
ಮಾಂದಲಪಟ್ಟಿಯಲ್ಲಿ ನಿಂತರೆ ಸುತ್ತಲೂ ಹರಡಿರುವ ಹಸಿರು ಹಾಸಿನ ಬೆಟ್ಟಗಳು ಮತ್ತು ಅವುಗಳನ್ನು ಮುಚ್ಚಿದ ಮಂಜಿನ ರಾಶಿ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳು ಅತ್ಯಂತ ಮನಮೋಹಕವಾಗಿರುತ್ತವೆ. ಆಕಾಶ ಬಣ್ಣ ಬಣ್ಣದ ಕಾವ್ಯದಂತೆ ಕಾಣುತ್ತದೆ. ಚಾರಣ ಮಾಡಲು ಇಷ್ಟಪಡುವವರಿಗೆ ಇದು ಸೂಕ್ತ ಜಾಗ. ಬೆಟ್ಟದ ತುದಿಗೆ ಹೋಗುವ ಹಾದಿಯಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು. ಬೆಟ್ಟದ ತುದಿಯಲ್ಲಿ ಅರಣ್ಯ ಇಲಾಖೆ ಒಂದು ವೀಕ್ಷಣಾ ಗೋಪುರ ನಿರ್ಮಿಸಿದೆ. ಇಲ್ಲಿಂದ ನಿಂತು ನೋಡಿದರೆ ಇಡೀ ಪಶ್ಚಿಮ ಘಟ್ಟಗಳ ಭವ್ಯ ನೋಟ ಕಣ್ಣಮುಂದೆ ಅನಾವರಣಗೊಳ್ಳುತ್ತದೆ.
ಇಂಥ ಅದ್ಭುತ ಜಾಗಕ್ಕೆ ತೆರಳಬೇಕಾದರೆ ಬಾಡಿಗೆ ಜೀಪುಗಳನ್ನು ಆಶ್ರಯಿಸಬೇಕಾಗಿದೆ. ಪ್ರವೇಶ ದ್ವಾರದಿಂದ ಬಾಡಿಗೆ ಜೀಪಿನಲ್ಲಿ ವೀಕ್ಷಣಾ ಸ್ಥಳದ ತನಕ ತೆರಳಬೇಕು. ಕಾರುಗಳಿಗೆ ಇಲ್ಲಿ ಪ್ರವೇಶ ಇರಲಿಲ್ಲ. ಈ ದುರ್ಗಮ ರಸ್ತೆಯಲ್ಲಿ ಕಾರುಗಳು ತೆರಳಲು ಸಾಧ್ಯವೂ ಇರಲಿಲ್ಲ. ಇದೀಗ ರಸ್ತೆಯನ್ನು ಸರಿಪಡಿಸಿರುವುದರಿಂದ ಮಾಂದಲಪಟ್ಟಿ ವೀಕ್ಷಣಾ ಗೋಪುರಕ್ಕೆ ತೆರಳುವ ಹಾದಿ ಸುಗಮವಾಗಿದೆ. ಈ ಹಿಂದಿನAತೆಯೇ ಪ್ರವೇಶ ಶುಲ್ಕ ಪಾವತಿಸಿ ತೆರಳಲು ಅವಕಾಶ ಕಲ್ಪಿಸಲಾಗಿದೆ.
ಪ್ರವೇಶದ್ವಾರದಿಂದ ವೀಕ್ಷಣಾ ಗೋಪುರಕ್ಕೆ ತೆರಳುವ ತೆರಳುವ ರಸ್ತೆಯನ್ನು ಸರಿಪಡಿಸಲಾಗಿದ್ದರೂ ಮಾಂದಲಪಟ್ಟಿಗೆ ತೆರಳುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿಗೆ ತೆರಳಲು ಈಗಲೂ ಪ್ರವಾಸಿಗರ ಕಾರುಗಳಿಗೆ ಅವಕಾಶ ಇಲ್ಲ. ದುರ್ಗಮ ಹಾದಿಯಲ್ಲಿ ಹೋಗಬೇಕಿರುವುದರಿಂದ ಕೆಲವು ಕಡೆಗಳಲ್ಲಿ ರಸ್ತೆ ಅಪಾಯಕಾರಿಯಾಗಿದೆ. ಹಾಗಾಗಿ ಜೀಪುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೈಕ್‌ಗಳಲ್ಲಿ ತೆರಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾಂದಲಪಟ್ಟಿಯನ್ನು ಅಭಿವೃದ್ಧಿ ಮಾಡಬೇಕು. ಪ್ರವಾಸಿಗರಿಗೆ ಇಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸಬೇಕು. ಪ್ರಕೃತಿಗೆ ಪೂರಕವಾದ ಯೋಜನೆಗಳನ್ನು ಈ ತಾಣದಲ್ಲಿ ರೂಪಿಸಬೇಕು ಎನ್ನುವುದು ಸ್ಥಳೀಯರ ಬಹುಕಾಲದ ಬೇಡಿಕೆ. ಆದರೆ ಪುಷ್ಪಗಿರಿ ವನ್ಯಜೀವಿ ವಲಯಕ್ಕೆ ಸೇರಿರುವುದರಿಂದ ಕಾಮಗಾರಿಗಳನ್ನು ನಡೆಸಲು ಹಲವು ನಿರ್ಬಂಧಗಳಿವೆ. ಇಷ್ಟಾದರೂ ಸಾಧ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಮಾಂದಲಪಟ್ಟಿಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿತ್ತು. 2024-29ರ ಕರ್ನಾಟಕ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ನೂತನ ಪ್ರವಾಸಿ ತಾಣಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಪಡೆಯುವ ಮೂಲಕ ಗುರುತಿಸಲಾಗಿತ್ತು.
ಇದರ ಜತೆಗೆ ಸರ್ಕಾರದ ಒಂದು ಜಿಲ್ಲೆ ಒಂದು ತಾಣ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಗೆ ಒಂದು ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಯೋಜಿಸಿ, ಕೊಡಗಿನಲ್ಲಿ ಮಾಂದಲ ಪಟ್ಟಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
"
ಮಾಂದಲಪಟ್ಟಿಗೆ ತೆರಳುವ ರಸ್ತೆಯನ್ನು ಸರಿಪಡಿಸಲಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಅರಣ್ಯ ಇಲಾಖೆಯಿಂದ ಸ್ಟೋನ್ ಪಿಚಿಂಗ್ ರಸ್ತೆ ಕಾಮಗಾರಿ ಮಾಡಲಾಗಿದೆ. ಯಂತ್ರಗಳನ್ನು ಬಳಸದೇ ಮಾನವ ಶ್ರಮದಿಂದಲೇ ರಸ್ತೆ ಸರಿಪಡಿಸಲಾಗಿದೆ. ಶುಕ್ರವಾರದಿಂದ ಮಾಂದಲಪಟ್ಟಿ ಪ್ರವಾಸಿಗರಿಗೆ ಮುಕ್ತವಾಗಿದೆ. ಬೆಳಗ್ಗೆ 6 ಗಂಟೆಯಿAದ ಸಂಜೆ 5 ಗಂಟೆ ತನಕ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ.
— ವಿ. ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ