ಅಕಾಲಿಕ ಮಳೆಯಿಂದ ಗಿಡಗಳಲ್ಲಿ ಕಾಫಿ ಹೂ ಅರಳಿರುವುದು.
ಸೋಮವಾರಪೇಟೆ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಅವಧಿಗೂ ಮುನ್ನ ಹೂ ಅರಳಿರುವುದು ಕಾಫಿ ಬೆಳೆಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
ವಿಶೇಷವಾಗಿ ಸೋಮವಾರಪೇಟೆ, ಕುಶಾಲನಗದ ತಾಲೂಕಿನಲ್ಲಿ ಅರೇಬಿಕಾ ಕಾಫಿ ಬೆಳೆಗಾರರು ಮುಂದಿನ ವರ್ಷದ ಇಳುವರಿ ಕುಸಿತದ ಭೀತಿಯನ್ನು ಎದುರಿಸುತ್ತಿದ್ದಾರೆ. ಇದರೊಂದಿಗೆ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಳವೂ ಬೆಳೆಗಾರರ ಮೇಲೆ ಮತ್ತೊಂದು ಹೊರೆ ಆಗಿದೆ. ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹೂ ಅರಳುವುದು ವಾಡಿಕೆ. ಆದರೆ ಈ ಬಾರಿ ಜನವರಿಯಲ್ಲೇ ಸುರಿದ ಅಕಾಲಿಕ ಮಳೆಯಿಂದಾಗಿ ಮೊಗ್ಗುಗಳು ಅವಧಿಗೂ ಮುನ್ನ ಅರಳಿದ್ದು, ಗಿಡಗಳ ಸ್ವಾಭಾವಿಕ ಬೆಳವಣಿಗೆಗೆ ಅಡ್ಡಿಯಾಗಿದೆ. ಸೋಮವಾರಪೇಟೆ ತಾಲೂಕಿನ ಶೇ.30ರಷ್ಟು ಕಾಫಿ ತೋಟಗಳಲ್ಲಿ ಈಗಾಗಲೇ ಹೂ ಅರಳಿರುವುದು ದಾಖಲಾಗಿದೆ. ಚಂದ್ರಗಿರಿ ತಳಿ ಮತ್ತು ರೋಬಸ್ಟಾ ಕಾಫಿ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂ ಕಾಣಿಸಿಕೊಂಡಿದ್ದು, ರೋಬಸ್ಟಾ ಬೆಳೆಗಾರರಿಗೆ ಹೆಚ್ಚಿನ ತೊಂದರೆ ಇಲ್ಲದಿದ್ದರೂ, ಅರೇಬಿಕಾ ಬೆಳೆಗಾರರು ತೀವ್ರ ಚಿಂತೆಗೆ ಒಳಗಾಗಿದ್ದಾರೆ.
ಅಕಾಲಿಕ ಮಳೆಯಿಂದಾಗಿ ರೋಬಸ್ಟಾ ಕಾಫಿ ಕೊಯ್ಲು ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಗಿಡಗಳಲ್ಲಿ ಉಳಿದಿರುವ ಹಣ್ಣುಗಳು ಉದುರುವ ಸ್ಥಿತಿಗೆ ಬಂದಿವೆ. ಉದುರಿದ ಹಣ್ಣುಗಳಿಂದ ಬೆರ್ರಿ ಬೋರರ್ ಕೀಟದ ಭೀತಿ ಹೆಚ್ಚುವ ಸಾಧ್ಯತೆ ಇದೆ. ಈ ಕೀಟ ಸಮಸ್ಯೆ ಮುಂದಿನ ಹಂಗಾಮಿನ ಬೆಳೆಗೂ ಮಾರಕವಾಗುವ ಸಾಧ್ಯತೆ ಇರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ.
ಬೆಳೆಗಾರರ ಅಭಿಪ್ರಾಯದಂತೆ, ಮಾರ್ಚ್ ತಿಂಗಳ ನಂತರ ಮಳೆ ಬಂದಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಾಮಾನ್ಯವಾಗಿ ಏಪ್ರಿಲ್ ನಂತರ ಮಳೆ ಇಲ್ಲದಿದ್ದಲ್ಲಿ ಬೋರ್‌ವೆಲ್‌ಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ಕೃತಕವಾಗಿ ನೀರು ಹಾಯಿಸಿ ಹೂ ಅರಳಿಸಲಾಗುತ್ತದೆ. ಮೊಗ್ಗಾದ ಬಳಿಕ ಬ್ಯಾಕಿಂಗ್ ನೀರನ್ನು ಸಿಂಪಡಿಸುವ ಮೂಲಕ ಉತ್ತಮ ಫಸಲು ಪಡೆಯುವುದು ರೂಢಿ. ಆದರೆ ಈ ಬಾರಿ ಸ್ವಾಭಾವಿಕ ಕ್ರಮಕ್ಕೆ ವಿರುದ್ಧವಾಗಿ ಅವಧಿಗೂ ಮುನ್ನ ಹೂ ಬಿಟ್ಟಿರುವುದು ಫಸಲು ಕಳೆದುಕೊಳ್ಳುವ ಆತಂಕ ಸೃಷ್ಟಿಸಿದೆ.
ಅರಳಿದ ಹೂವಿಗೆ ಬ್ಯಾಕಿಂಗ್ ನೀರು ಹಾಯಿಸಿದರೆ ಮಾತ್ರ ಫಸಲು ಕಟ್ಟುತ್ತದೆ. ಈಗ ನೀರು ಕೊಟ್ಟರೆ ಉಳಿಕೆ 70 ಭಾಗದಲ್ಲಿ ಅರ್ಧಂಬರ್ಧ ಹೂ ಅರಳಿ ಇನ್ನಷ್ಟು ನಷ್ಟವಾಗುತ್ತದೆ. ಈ ಕಾರಣದಿಂದ ಬೆಳೆಗಾರರು ಕೃತಕವಾಗಿ ನೀರು ಕೊಡಲು ಮುಂದಾಗುತ್ತಿಲ್ಲ. ಮುಂದಿನ ಮಳೆ ನೋಡಿಕೊಂಡು ನೀರು ಹಾರಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಳೆಗಾರ ಶಿವರಾಜ್ ಹೇಳಿದರು.
ಅಕಾಲಿಕ ಹೂ ಅರಳಿರುವುದರಿಂದ ಪರಾಗಸ್ಪರ್ಶಕ್ಕೂ ಅಡ್ಡಿಯಾಗಿದೆ. ಈ ಸಮಯದಲ್ಲಿ ಜೇನುನೊಣಗಳು ತೋಟಗಳಿಗೆ ಆಗಮಿಸದಿರುವುದರಿಂದ ಹೂವಿನ ಪೂರ್ಣ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಪರಿಣಾಮ ಹಣ್ಣು ಕಟ್ಟುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೌಡ್ಲು ಗ್ರಾಮದ ಕಾಫಿ ಬೆಳೆಗಾರ ಮಹೇಶ್ ತಿಮ್ಮಯ್ಯ ಮಾತನಾಡಿ, ಸೋಮವಾರಪೇಟೆ ತಾಲೂಕಿನ ಹಲವೆಡೆ ಕಳೆದ ವಾರ ಮಳೆ ಬಂದಿರುವುದರಿಂದ ಕಾಫಿ ಹೂ ಅರಳಿದೆ. ಈಗಾಗಲೇ ಕಾಫಿ ಬೆಲೆ ಕುಸಿತದಲ್ಲಿದ್ದು, ಮುಂದಿನ ವರ್ಷ ಇಳುವರಿ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರೊಂದಿಗೆ ಕಾರ್ಮಿಕರ ಕೂಲಿ ವೆಚ್ಚವೂ ಹೆಚ್ಚಿದ್ದು, ಬೆಳೆಗಾರರಿಗೆ ಸಂಕಷ್ಟ ಹೆಚ್ಚಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಅಕಾಲಿಕ ಮಳೆ, ಅವಧಿಗೂ ಮುನ್ನ ಹೂ ಅರಳಿರುವುದು, ಕೀಟಗಳ ಭೀತಿ, ಹೆಚ್ಚಾದ ಕಾರ್ಮಿಕ ಕೂಲಿ ಹಾಗೂ ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ಪ್ರಸಕ್ತ ವರ್ಷವೂ ಕಾಫಿ ಬೆಳೆಗಾರ ಫಸಲು ನಷ್ಟ ಭೀತಿಯಲ್ಲಿದ್ದಾರೆ.