ಮಹಾದೇವ ಕ್ರೀಡಾ ಮಂಡಳಿ ಬಲಮುರಿ ವತಿಯಿಂದ 74ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ವನ್ನು ಮಡಿಕೇರಿಯ ಸಾಂತ್ವನ ಮಹಿಳಾ ಸಹಾಯವಾಣಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೌಟುಂಬಿಕ ಸಲಹೆಗಾರರಾದ ಗುಡ್ಡೆರ ಆರ್. ಚಂದ್ರಮ್ಮ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ಸರಸ್ವತಿ ಗಣಪತಿ, ಗುಡ್ಡೆರ ರಮೇಶ್, ಬೊಳ್ಳಚಟ್ಟಿರ ಚಿಟ್ಟೆಚ್ಚ ಇತರರಿದ್ದರು.
ಮಗಳು ಪ್ರಥಮ ಸ್ಥಾನ, ತಂದೆ ದ್ವಿತೀಯ
ನಾಪೋಕ್ಲು: ಮಹಾದೇವ ಕ್ರೀಡಾ ಮಂಡಳಿ ಬಲಮುರಿ ವತಿಯಿಂದ 74ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಬಲಮುರಿಯ ಬಳಂಗಮುಡಿ ಮೈದಾನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಮಹಾದೇವ ಕ್ರೀಡಾ ಮಂಡಳಿಯ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟವನ್ನು ಮಡಿಕೇರಿಯ ಸಾಂತ್ವನ ಮಹಿಳಾ ಸಹಾಯವಾಣಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೌಟುಂಬಿಕ ಸಲಹೆಗಾರರಾದ ಗುಡ್ಡೆರ ಆರ್.ಚಂದ್ರಮ್ಮ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ತೊತ್ತಿಯಂಡ ಸರಸ್ವತಿ ಗಣಪತಿ, ಮಡಿಕೇರಿ ಟೌನ್ ಬ್ಯಾಂಕ್ ಉದ್ಯೋಗಿ ಗುಡ್ಡೆರ ರಮೇಶ್, ಬಲಮುರಿ ಈಶ್ವರ ದೇವಸ್ಥಾನದ ಅನ್ನದಾನ ಸಮಿತಿ ಅಧ್ಯಕ್ಷರಾದ ಬೊಳ್ಳಚಟ್ಟಿರ ಚಿಟ್ಟೆಚ್ಚ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಪೆಬ್ಬಾಟಂಡ ಆದ್ಯ ಮುತ್ತಣ್ಣ ಪ್ರಥಮ, ಬಹುಮಾನವನ್ನು ಪಡೆದುಕೊಂಡರೆ ಅವರ ತಂದೆ ಪೆಬ್ಬಾಟಂಡ ಮುತ್ತಣ್ಣ ಪೆಮ್ಮಯ್ಯ ದ್ವಿತೀಯ ಸ್ಥಾನ ಪಡೆದುಕೊಂಡು ವಿಶೇಷವಾಗಿ ದಾಖಲೆ ನಿರ್ಮಿಸಿದರು. ಪಾಲಂದಿರ ಜೀವನ್ ಮೊಣ್ಣಪ್ಪ ತೃತೀಯ ಸ್ಥಾನ ಪಡೆದುಕೊಂಡರು.
ಪುರುಷರ ಹಗ್ಗ ಜಗ್ಗಾಟದಲ್ಲಿ ಪಾಲೆಂಗಟ್ಟ್ ಕೇರಿ ಪ್ರಥಮ, ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಪೆರಿಯಂಗಟ್ಟ್ ಪ್ರಥಮ ಸ್ಥಾನ ಪಡೆದುಕೊಂಡರು. ವಯಸ್ಕರಿಗೆ ಹಾಗೂ ಎಲ್ಲ ವಯೋಮಾನದವರಿಗೆ ವಿವಿಧ ಮನರಂಜನಾ ಕ್ರೀಡಾಕೂಟ ಜರುಗಿತು.
ಕಳೆದ 74 ವರ್ಷಗಳಿಂದ ಹಿರಿಯರು ಕಟ್ಟಿ ಬೆಳೆಸಿದ ಸಂಘದ ಮೂಲಕ ಹಬ್ಬ ಆಚರಣೆಯ ಸೊಗಡನ್ನು ಕ್ರೀಡಾಕೂಟದ ಮೂಲಕ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸಲು ಕ್ರೀಡಾಕೂಟ ಸಹಕಾರಿ ಎಂದು ಗಣ್ಯರು ಅಭಿಪ್ರಾಯಪಟ್ಟರು.