ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ರುದ್ರ ಮಾತನಾಡಿದರು. ಬೆನೆಡಿಕ್ಟ್ ಆರ್. ಸಾಲ್ಡಾನಾ, ರಾಘವೇಂದ್ರ , ಡಾ.ಕೆ.ಜಿ.ವೀಣಾ , ಅನುಪಮಾ ಇತರರು ಇದ್ದರು.
ವಿರಾಜಪೇಟೆ : ಸಕಾರಾತ್ಮಕ ಚಿಂತನೆ, ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಗುರಿಯನ್ನು ಮುಟ್ಟಬಹುದು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ರುದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಸಮಯ ನಿರ್ವಹಣೆ, ಇತಿಹಾಸ ವಿಷಯದ ಮಹತ್ವ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಬದುಕಿನ ನಿರ್ಮಾಣ ನಮ್ಮ ಕೈಯಲ್ಲೇ ಇದೆ. ನಮ್ಮನ್ನು ನಾವು ಇತರರಿಗೆ ಹೋಲಿಸಿ ಕೊಳ್ಳುವುದು ಎಂದರೆ ಅದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ ಎಂದರು. ಅದೃಷ್ಟ, ಹಣೆಬರಹಗಳಿಂದ ವಿಜಯ ದೊರಕುವುದಿಲ್ಲ. ನಮ್ಮಲ್ಲಿ ಆತ್ಮವಿಶ್ವಾಸವಿರಬೇಕು. ಇದು ಸವಾಲನ್ನು ಹೇಗೆ ಎದುರಿಸಬೇಕೆಂದು ಕಲಿಸುತ್ತದೆ. ನಮಗೆ ಸಿಕ್ಕ ಪ್ರತಿಯೊಂದು ಅವಕಾಶಗಳನ್ನೂ ಸರಿಯಾದ ರೀತಿಯಲ್ಲಿ, ಸೂಕ್ತ ಮಾರ್ಗದಲ್ಲಿ ಬಳಸಿಕೊಂಡು ಸಾಗಿದಾಗ ಮಾತ್ರ ಯಶ ಕಾಣಲು ಸಾಧ್ಯ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಸಮಯ ಪ್ರಜ್ಞೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ನಾವು ಸಮಯವನ್ನು ಗೌರವಿಸಿದರೆ ಸಮಯ ನಮಗೆ ಗೌರವವನ್ನು ತಂದು ಕೊಡುತ್ತದೆ ಎಂದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರಲ್ಲಿ ಮೊದಲು ಮಾನಸಿಕ ಸಿದ್ಧತೆ ಬೇಕು. ನಿರಂತರವಾಗಿ ಓದುವಂತಹ ಪ್ರಕ್ರಿಯೆ ಹಾಗೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆದರೆ ಯಶಸ್ಸಿನ
ಕಡೆಗೆ ಸಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಗುವ ಸಂದರ್ಭ ಅಧಿ ಸೂಚನೆಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಪಠ್ಯಕ್ರಮಕ್ಕೆ ಅನುಗುಣವಾಗಿ ಸೂಕ್ತ ಪುಸ್ತಕ ಹಾಗೂ ಪರಾಮರ್ಶನ ಗ್ರಂಥಗಳನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು. ರೀಡ್, ರಿವಿಜನ್ ಮತ್ತು ರಿಕಾಲ್ ಎಂಬ ಸೂತ್ರ ಅಳವಡಿಸಿಕೊಳ್ಳಿ. ಸಾಧ್ಯವಾದಷ್ಟೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಕೆಲಸ ಆದಾಗ ಪರೀಕ್ಷೆಯ ತಯಾರಿ ಸೂಕ್ತವಾಗಿ ಸಾಗುತ್ತದೆ ಎಂದು ರುದ್ರ ಕಿವಿಮಾತು ಹೇಳಿದರು. ಅನಗತ್ಯವಾಗಿ ಮೊಬೈಲ್ ಫೋನ್ ಬಳಕೆ ಮಾಡಬೇಡಿ. ಸಾಮಾಜಿಕ ಮಾಧ್ಯಮದಲ್ಲೇ ಸಮಯ ಹರಣ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 20 ಪ್ರಶ್ನೆಗಳು ಇತಿಹಾಸ ವಿಷಯದಿಂದ ಇದ್ದು ಅದಷ್ಟೂ ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್
ಆರ್. ಸಾಲ್ಡಾನಾ, ಒಂದು ಬಾರಿ ಸೋತರೆ ಹತಾಶರಾಗದಿರಿ. ಸತತ ಪ್ರಯತ್ನವನ್ನು ಮಾಡುತ್ತಾ ಯಶಸ್ಸಿನ ಕಡೆಗೆ ಸಾಗಬೇಕು ಎಂದರು.
ಐಕ್ಯೂ ಎಸಿ ಸಂಯೋಜಕ ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾನಾ ಸಮಿತಿಯ ಮುಖ್ಯಸ್ಥರಾದ ಡಾ. ಕೆ.ಜಿ ವೀಣಾ, ಇತಿಹಾಸ ವಿಭಾಗದ ಮುಖ್ಯಸ್ಥ ಸಿ.ಪಿ. ಅನುಪಮಾ ಉಪಸ್ಥಿತರಿದ್ದರು .