ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಕುಟ್ಟದಲ್ಲಿ ನಡೆದ 20ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎನ್.ಯು ನಾಚಪ್ಪ ಮಾತನಾಡಿದರು.
ಗೋಣಿಕೊಪ್ಪಲು: ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಆದರೆ ಇಂದು ಜನಗಣತಿಯೂ ಸೇರಿದಂತೆ ರಾಜ್ಯದ ದಾಖಲೆಗಳ ಎಲ್ಲ ಕಾಲಂಗಳು ಈ ದೇಶದ ಬಹುಧರ್ಮ, ಪ್ರಬಲ ಧರ್ಮ ಮತ್ತು ಬಲಾಡ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಲ್ಪಟ್ಟಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು 2026-2027 ನಡೆಯಲಿರುವ ರಾಷ್ಟ್ರೀಯ ಜನಗಣತಿ ಸಂದರ್ಭ ಪ್ರತ್ಯೇಕವಾಗಿ ‘ಕೊಡವ’ ಎಂದು ನಮೂದಿಸುವಂತೆ ಜನಜಾಗೃತಿ ಮೂಡಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಕುಟ್ಟದಲ್ಲಿ ನಡೆದ 20ನೇ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆನಿಮಿಸ್ಟಿಕ್ ನಂಬಿಕೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಕೊಡವ ನೆಲ ಬಿಟ್ಟರೆ ಬೇರೆ ಎಲ್ಲೂ ಕೊಡವರಿಗೆ ಸ್ವಂತ ಸ್ಥಳವಿಲ್ಲ. ಇಂದಿನ ಕಾಲಮಾನದಲ್ಲಿ ಕೊಡವರ ರಕ್ಷಣೆಯಾಗಬೇಕಾಗಿದೆ ಮತ್ತು ಸಂಪೂರ್ಣ ಸಬಲೀಕರಣವಾಗಬೇಕಾಗಿದೆ. ಜಾತಿ ಜನಗಣತಿಯ ಮೂರು ಕಾಲಂಗಳಲ್ಲಿ ಕೊಡವರು ‘ಕೊಡವ’ ಎಂದು ನಮೂದಿಸುವಂತೆ ಸಲಹೆ ನೀಡಿದರು.
21ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ 23ರಂದು ಪಾಲಿಬೆಟ್ಟದಲ್ಲಿ ಮತ್ತು 22ನೇ ಕಾರ್ಯಕ್ರಮ ಡಿ.15 ರಂದು ತಿತಿಮತಿಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬಿಟ್ಟಂಗಾಲ ಮತ್ತು ಹುದಿಕೇರಿಯಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
ಮಚ್ಚಮಾಡ ಪ್ರಕಾಶ್, ತೀತಿರ ರಘು, ಅಜ್ಜಿಕುಟೀರ ಲೋಕೇಶ್, ಕಳ್ಳಿಚಂಡ ದಿಲೀಪ್ ಉಪಸ್ಥಿತರಿದ್ದರು.