ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯಲ್ಲಿ ಕೆಡಿಪಿ ಸಭೆ ನಡೆಯಿತು. ಸೌಮ್ಯಾ, ಪ್ರವೀಣ್, ಕುಮಾರಸ್ವಾಮಿ ಇದ್ದರು. 
ಕೊಡಗು

ಅಪಾಯಕಾರಿ ಮರಗಳನ್ನು ತೆರವುಗೊಳಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಸೌಮ್ಯಾ ಸೂಚನೆ
  • ಗ್ರಾಮ ಪಂಚಾಯಿತಿ ಮಟ್ಟದ ಕೆಡಿಪಿ ಸಭೆ
ಕುಶಾಲನಗರ: ಬಸವನಹಳ್ಳಿ ಸರ್ವೇ ನಂಬರ್ 1/1 ಸರ್ಕಾರಿ ಬಡಾವಣೆ ಹಾಗೂ ಬಸವನಹಳ್ಳಿ ಮುರಾರ್ಜಿ ಶಾಲೆ, ಗುಡ್ಡೆ ಹೊಸೂರು ಪ್ರಾಥಮಿಕ ಶಾಲಾ ಆವರಣಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಸೂಚನೆ ನೀಡಿದರು.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಭಾಗವಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಪ್ರಸ್ತಾವನೆ ಬಂದಿರುವ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸದ್ಯದಲ್ಲಿ ಜೇನು ಕುರುಬರ ಸರ್ವೇ ಕಾರ್ಯ ನಡೆಯಲಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಇಲಾಖೆಯಿಂದ ಲಭ್ಯವಿರುವ ಇತರ ಯೋಜನೆಗಳ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದರು.
ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲಾಗುತ್ತಿದ್ದು, ಪ್ರತಿ ಮೊಟ್ಟೆಗೆ 5.30 ರೂ. ನಿಗದಿಪಡಿಸಿದ್ದು ಮಾರುಕಟ್ಟೆ ದರ ಜಾಸ್ತಿ ಇರುವುದರಿಂದ ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಬಸವನಹಳ್ಳಿ ಪ್ರೌಢಶಾಲಾ ಶಿಕ್ಷಕ ಮಹೇಂದ್ರ ವಿಷಯ ಪ್ರಸ್ತಾಪ ಮಾಡಿದರು. ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ತಮ್ಮ ಶಾಲೆಗೆ ಸುಸಜ್ಜಿತ ಶೌಚಗೃಹ, ಆವರಣ ಗೋಡೆ, ಸಭಾಭವನಕ್ಕೆ ಇಂಟರ್ಲಾಕ್ ಅಳವಡಿಕೆ ಮಾಡಿ ಕೊಟ್ಟಿದ್ದು, ಸರ್ಕಾರದಿಂದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಕಿರಣ್ ಮಾತನಾಡಿ, ತಮ್ಮ ವ್ಯಾಪ್ತಿಯ ನಾಲೆಗಳ ಸ್ವಚ್ಛತಾ ಕಾರ್ಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ಬಸವನಹಳ್ಳಿ ಹಾಗೂ ಮಾದಾಪಟ್ಟಣ ಗ್ರಾಮಗಳಲ್ಲಿ ನಾಲೆಗಳಿಂದ ಗ್ರಾಮದ ಜನರಿಗೆ ಯಾವುದೇ ಉಪಯೋಗವಿಲ್ಲ. ಹಾಗಾಗಿ ನಾಲೆಗಳನ್ನು ಮುಚ್ಚುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.
ಹಾಲು ಉತ್ಪಾದಕರಿಗೆ ಕಳೆದ ಆರು ತಿಂಗಳಿಂದ ಪ್ರೋತ್ಸಾಹ ಧನ ಬಿಡುಗಡೆ ಆಗಿಲ್ಲ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಮಾತನಾಡಿ, ಈಗಾಗಲೇ ಕಾಲುಬಾಯಿ ಜ್ವರಕ್ಕೆ ಸಂಬಂಧಿಸಿದಂತೆ, ಚಿಕಿತ್ಸೆ ನೀಡಲಾಗುತ್ತಿದ್ದು ನಾಯಿ ಮತ್ತು ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ಲಸಿಕೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.
ಮಾದಾಪಟ್ಟಣ ಗ್ರಾಮದ ಗೋಮಾಳ ಜಾಗ ಅತಿಕ್ರಮಣವಾಗುತ್ತಿದ್ದು, ಈ ಅತಿಕ್ರಮಣವನ್ನು ತೆರವುಗೊಳಿಸಿ, ಗೋಮಾಳವನ್ನು ಉಳಿಸುವಂತೆ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಅವರನ್ನು ಆಡಳಿತ ಮಂಡಳಿ ಸದಸ್ಯರು ಆಗ್ರಹಿಸಿದರು.
ಪಂಚಾಯಿತಿಯಿಂದ ಸಂಜೀವಿನಿ ಸಂತೆಯನ್ನು ಹಮ್ಮಿಕೊಳ್ಳಲಾಗಿದ್ದು, ವಿವಿಧ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ನೀಡಲು ಬಯಸಿದರೆ ಈ ಸಂಜೀವಿನಿ ಸಂತೆಯಲ್ಲಿ ಪ್ರತ್ಯೇಕ ಮಳಿಗೆಗಳನ್ನು ನೀಡುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ತಿಳಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಪ್ರವೀಣ್ ಆಡಳಿತ ಮಂಡಳಿ ಸದಸ್ಯರು, ಕಾರ್ಯದರ್ಶಿ ಕುಮಾರಸ್ವಾಮಿ ಇದ್ದರು.