ಸ್ವಚ್ಛ ಕೊಡಗು-ಸುಂದರ ಕೊಡಗು ಅಭಿಯಾನಕ್ಕೆ ಮಡಿಕೇರಿ ರಾಜಾ ಸೀಟ್ ಎದುರಿನಲ್ಲಿ ಚಾಲನೆ ನೀಡಲಾಯಿತು. ಪಿ. ಕಲಾವತಿ, ನಿತಿನ್ ಚಕ್ಕಿ, ದಿನೇಶ್ ಕಾರ್ಯಪ್ಪ, ಮೋಂತಿ ಗಣೇಶ್ ಮತ್ತಿತರರು ಇದ್ದರು.
ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ ಸೋಮವಾರ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ, ಪ್ರವಾಸೋದ್ಯಮ, ಪ್ರವಾಸೋದ್ಯಮ ಇಲಾಖೆಯ ಪಾಲುದಾರರು ಹಾಗೂ ಇತರರ ಸಹಕಾರದಲ್ಲಿ ಸ್ವಚ್ಚ ಹಾಗೂ ಸುಂದರ ಕೊಡಗು ಅಭಿಯಾನ ಏರ್ಪಡಿಸಲಾಗಿತ್ತು.
ನಗರದ ರಾಜಾಸೀಟು ಉದ್ಯಾನವನದಲ್ಲಿ ಅಭಿಯಾನಕ್ಕೆ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿ. ಕಲಾವತಿ ಮಡಿಕೇರಿ ನಗರದಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಬಾಟಲಿ ನೀರನ್ನು ನಿಷೇಧಿಸಲಾಗಿದೆ. ಇದರಿಂದ ಪ್ಲಾಸ್ಟಿಕ್ ಬಳಕೆ ಸಾಧ್ಯವಾದಷ್ಟು ನಿಯಂತ್ರಣಕ್ಕೆ ಬಂದಿದೆ. ಅದೇ ರೀತಿ ಮುಂದುವರೆಯಬೇಕು. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದರು.
ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಪ್ಲಾಸ್ಟಿಕ್ ಬಳಸಬಾರದು. ಶುಚಿತ್ವಕ್ಕೆ ಒತ್ತು ಕೊಟ್ಟಲ್ಲಿ ಉತ್ತಮ ಪರಿಸರ ಮತ್ತು ಆರೋಗ್ಯವನ್ನು ಕಾಣಬಹುದು ಎಂದು ಹೇಳಿದರು.
ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮಾತನಾಡಿ ಕೊಡಗು ಜಿಲ್ಲಾ, ತಾಲೂಕು ಹಾಗೂ ಪ್ರವಾಸಿ ಸ್ಥಳಗಳು ಸೇರಿದಂತೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಚ್ಚಹಸಿರಿನ ಕೊಡಗು ಮತ್ತಷ್ಟು ಸುಂದರವಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ ಎಂದರು.
ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್, ಪ್ರವಾಸೋದ್ಯಮ ಪಾಲುದಾರರಾದ ಬಿ.ಜಿ. ಅನಂತಶಯನ, ಜಿ.ಚಿದ್ವಿಲಾಸ್, ಎಫ್‌ಎಂಸಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಬಿ.ರಾಘವ ಇತರರು ಇದ್ದರು.
ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಲಕಾವೇರಿ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲ, ಪ್ರವಾಸಿ ಸ್ಥಳಗಳಾದ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ, ನಾಲ್ಕುನಾಡು ಅರಮನೆ, ರಾಜರ ಗದ್ದುಗೆ, ರಾಜಾಸೀಟು, ಕೋಟೆ, ಅಬ್ಬಿ ಜಲಪಾತ, ಚೇಲಾವರ ಜಲಪಾತ. ಕುಶಾಲನಗರ ತಾಲೂಕಿನ ದುಬಾರೆ ರಿವರ್ ರ‍್ಯಾಫ್ಟಿಂಗ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಹಾರಂಗಿ ಉದ್ಯಾನವನ ಆನೆ ಶಿಬಿರ ಮತ್ತು ಹಿನ್ನೀರಿನ ಸಾಹಸ ಕ್ರೀಡೆ ಸ್ಥಳಗಳು, ಚಿಕ್ಲಿ ಹೊಳೆ. ಸೋಮವಾರಪೇಟೆ ತಾಲೂಕಿನ ಹೊನ್ನಮ್ಮ ಕೆರೆ, ಮಕ್ಕಳ ಗುಡಿ ಬೆಟ್ಟ, ಕೋಟೆ ಬೆಟ್ಟ, ಸೂರ್ಲಬ್ಬಿ ಜಲಪಾತ ಮತ್ತು ಮಲ್ಲಳ್ಳಿ ಜಲಪಾತ. ಹಾಗೆಯೇ ಪೊನ್ನಂಪೇಟೆ ತಾಲೂಕಿನ ಬರಪೊಳೆ ರಿವರ್ ರ‍್ಯಾಫ್ಟಿಂಗ್ ಮತ್ತು ಇರ್ಪು ಜಲಪಾತ ಇಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಮಡಿಕೇರಿ ನಗರದಲ್ಲಿ ವಿರಾಜಪೇಟೆ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ(ಮಂಗಳೂರು ರಸ್ತೆ), ಮಡಿಕೇರಿ-ಸಿದ್ದಾಪುರ ರಸ್ತೆ ಮತ್ತು ಮಡಿಕೇರಿ-ಮೈಸೂರು ರಸ್ತೆ ಈ ವ್ಯಾಪ್ತಿಯ 2 ಕಿ,.ಮೀ ವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ಕುಶಾಲನಗರದಲ್ಲಿ ಕೊಪ್ಪ ಗೇಟಿನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ಸೋಮೇಶ್ವರ ದೇವಸ್ಥಾನದಿಂದ ಕೋಣಮಾರಮ್ಮ ದೇವಸ್ಥಾನ ವೃತ್ತದ ಮುಖಾಂತರ ಐಬಿ ರಸ್ತೆಗಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ, ತಾವರೆಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೆ ಮತ್ತು ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೆಎಸ್‌ಆರ್‌ಸಿ ಬಸ್ ನಿಲ್ದಾಣದವರೆಗೆ ಸ್ವಚ್ಚ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಕೊಡಗು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕಾವೇರಿ ನಿಸರ್ಗಧಾಮ ಎನ್.ಟಿ.ಸಿ ಹಾಗೂ ಕೂರ್ಗ್ ರಿವೇರ್ ರೆಸಾರ್ಟ್ ಇದರ ಸಹಯೋಗದಿಂದ ಹಾಗೂ ಅರಣ್ಯ ಅಧಿಕಾರಿಗಳು ಇವರೆಲ್ಲರ ಸಹಯೋಗದಿಂದ ಸುಮಾರು 50 ಜನರು ಕಾವೇರಿ ನಿಸರ್ಗಧಾಮ ಮುಂಭಾಗದಿAದ ಗುಡ್ಡೆಹೊಸೂರು ರೋಡು ಮಾರ್ಗವಾಗಿ ಎಡಕ್ಕೂ ಹಾಗೂ ಬಲಕ್ಕೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ (ಕುಶಾಲನಗರ), ರಿವರ್ ರ‍್ಯಾಪ್ಟಿಂಗ್ ಅಸೋಷಿಯೇಷನ್(ದುಬಾರೆ), ಸೋಮವಾರಪೇಟೆ ಹೋಂ ಸ್ಟೇ ಅಸೋಷಿಯನ್ ಅಧ್ಯಕ್ಷ ರೋಹಿತ್(ಸೋಮವಾರಪೇಟೆ) ಇತರರು ಆಯಾಯ ತಾಲೂಕಿನಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.