ಸೋಮವಾರಪೇಟೆ ಸಮೀಪದ ಚೌಡ್ಲು ಕುವೆಂಪು ಶಾಲೆಯಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹಲಸಿನ ಕಾಯಿಯ ಕೆತ್ತನೆ ಗಮನ ಸೆಳೆಯಿತು.
- ಕಲಾತ್ಮಕತೆ, ನವೀನತೆ, ಸೃಜನಶೀಲ ಪ್ರತಿಭೆ ಅನಾವರಣ
ಸೋಮವಾರಪೇಟೆ: ಒಕ್ಕಲಿಗರ ಸಂಘದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸುವ ವಿವಿಧ ಸ್ಪರ್ಧಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಬೆಂಕಿ ಬಳಸದೆ ತಯಾರಿಸಿದ ವಿಭಿನ್ನ ಆಹಾರ ಪದಾರ್ಥಗಳು, ತರಕಾರಿಗಳ ಕೆತ್ತನೆಗಳು ಮತ್ತು ಹೂವಿನ ಅಲಂಕಾರಗಳ ಸರ್ಧೆಗಳು ನಡೆದವು. ವಿದ್ಯಾರ್ಥಿಗಳು ತಮ್ಮ ಕಲಾತ್ಮಕತೆ, ನವೀನತೆ ಹಾಗು ಸೃಜನಶೀಲ ಪ್ರತಿಭೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದರು. ಬೆಂಕಿ ಬಳಸದೆ ತಯಾರಿಸಿದ ವಿಭಿನ್ನ ಆಹಾರ ಪದಾರ್ಥಗಳು, ತರಕಾರಿಗಳ ಆಕರ್ಷಕ ಕೆತ್ತನೆಗಳು ಮತ್ತು ಮನಮೋಹಕ ಹೂವಿನ ಅಲಂಕಾರಗಳು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಅಶ್ವಿನಿ ಕೃಷ್ಣಕಾಂತ್, ಸುಮತಿ, ಅಶ್ವಿನಿ ಚನ್ನಕೇಶವ ಹಾಗೂ ಉಷಾ ಗಿರಿಧರ್ ಆಗಮಿಸಿ ಸ್ಪರ್ಧಾರ್ಥಿಗಳ ಪ್ರದರ್ಶನವನ್ನು ಮೌಲ್ಯಮಾಪನ ಮಾಡಿ ತೀರ್ಪು ನೀಡಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡಕಾರ್ಯ ಹಾಗೂ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸುವಲ್ಲಿ ಇಂತಹ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗುತ್ತದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹೇಳಿದರು. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.