ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಕೊಡಗು ಜಿಲ್ಲೆಯ ಪ್ರೌಢಶಾಲೆಗಳಿಗೆ ಕನ್ನಡಸಿರಿ ಸ್ನೇಹ ಬಳಗ ವತಿಯಿಂದ ಸಾಧನಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಮಂತರ್ ಗೌಡ, ಹಂಡ್ರAಗಿ ನಾಗರಾಜ್, ಎಂ.ಡಿ. ರಂಗಸ್ವಾಮಿ, ಬಿ.ಎಸ್. ಲೋಕೇಶ್ ಸಾಗರ್, ಬಸವರಾಜು, ಶೋಭಾ ಸುಬ್ಬಯ್ಯ ಮತ್ತಿತರರು ಇದ್ದರು.
ಶಿಕ್ಷಕರು ಇಂದು ಸಾಮಾನ್ಯ ಪಠ್ಯಗಳ ಜತೆಗೆ ಪುಸ್ತಕಗಳಿಂದ ಹೊರತಾದ ಜ್ಞಾನವನ್ನು ಮಕ್ಕಳಿಗೆ ಕೊಡುವ ಅಗತ್ಯವಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಕೊಡಗು ಜಿಲ್ಲೆಯ ಪ್ರೌಢಶಾಲೆಗಳಿಗೆ ಕನ್ನಡಸಿರಿ ಸ್ನೇಹ ಬಳಗ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಧನಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊದಲೆಲ್ಲಾ ಶಿಕ್ಷಕರು ಹೊಡೆದು, ಬೈಗುಳ ಜತೆಗೆ ಪಾಠ ಹೇಳಿಕೊಟ್ಟು ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದರು. ಬದಲಾದ ದಿನಗಳಲ್ಲಿ ಮಕ್ಕಳಿಗೆ ಹೊಡೆಯುವುದಾಗಲಿ, ಬೈಯುವುದನ್ನಾಗಲಿ ಮಾಡುವಂತಿಲ್ಲ. ಈಗಿನ ಮಕ್ಕಳು ಕೂಡ ಕಲಿಯುವುದರಲ್ಲಿ ತುಂಬಾ ಚುರುಕಾಗಿದ್ದಾರೆ. ಶಿಕ್ಷಕರು ಹೇಳಿದ್ದನ್ನು ಬೇಗನೇ ಕಲಿತುಕೊಳ್ಳುತ್ತಾರೆ. ಹಾಗಾಗಿ ಶಿಕ್ಷಕರ ಶ್ರಮದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಫಲಿತಾಂಶದಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬರುತ್ತಿದೆ. ಆದರೆ ಉತ್ತಮ ಫಲಿತಾಂಶ ಪಡೆದವರೆಲ್ಲಾ ಪೈಪೋಟಿಯ ಜಗತ್ತಿನಲ್ಲಿ ಯಶಸ್ವಿಯಾಗಲು ಪಠ್ಯದಿಂದ ಹೊರತಾದ ಜ್ಞಾನದ ಅಗತ್ಯವೂ ಇದೆ. ಇದನ್ನು ಕೊಡಲು ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕರನ್ನು ಮಕ್ಕಳು ಬೇಗನೇ ಅನುಸರಿಸುವುದರಿಂದ ಶಿಕ್ಷಕರು ಎಲ್ಲಾ ವಿಷಯದಲ್ಲೂ ಮಕ್ಕಳಿಗೆ ಮಾದರಿ ಆಗಿರಬೇಕು.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಜಿಲ್ಲೆಗೆ ಹೆಮ್ಮೆ ತಂದಿದೆ. ಶಿಕ್ಷಕರ ಜವಾಬ್ದಾರಿಯೂ ಹೆಚ್ಚಾಗಿದೆ. ಈ ಬಾರಿ ಶೇಕಡವಾರು ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ್ದರೂ ರ‍್ಯಾಂಕಿAಗ್‌ನಲ್ಲಿ ಕುಸಿತ ಕಂಡುಬAದಿದೆ. ಈ ಬಗ್ಗೆ ವಿಮರ್ಶೆ ಆಗಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ದೊಡ್ಡ ಮಟ್ಟಿಗೆ ಸಾಧನೆ ಮಾಡಬೇಕು. ಕಡಿಮೆ ಅಂಕ ಗಳಿಸುವ ಮಕ್ಕಳನ್ನು ಗುರುತಿಸಿ ಅವರೂ ಹೆಚ್ಚಿನ ಅಂಕ ಗಳಿಸುವಂತೆ ಪ್ರೇರೇಪಿಸಬೇಕು. ಅಗತ್ಯಬಿದ್ದರೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಬೇಕು.
ಶಿಕ್ಷಕರು ಮಕ್ಕಳ ಜತೆ ಒಡನಾಟದಲ್ಲಿ ಇರುವುದರಿಂದ ಅವರಲ್ಲಿ ಆಗುವ ಬದಲಾವಣೆಗಳು ಕೂಡಲೇ ಅರಿವಿಗೆ ಬರುತ್ತದೆ. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಕಂಡುಬAದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆö ಆಗಬೇಕು. ಮಕ್ಕಳಿಗೆ ಸಕರಾತ್ಮಕ ವಿಷಯಗಳ ಮೂಲಕ ಪಾಠ ಮಾಡಬೇಕು. ಮಕ್ಕಳಿಗೆ ಶಿಕ್ಷಕರು ಸ್ನೇಹಿತರೂ ಆಗಿರಬೇಕು. ಮಕ್ಕಳಿಗಾಗಿ ಶ್ರಮವಹಿಸುವ ಶಿಕ್ಷಕರ ಬೇಕು, ಬೇಡಿಕೆಗಳಿಗೆ ಅಧಿಕಾರಿಗಳಿ ಸ್ಪಂದಿಸಬೇಕು. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದೇ ಶಿಕ್ಷರು ನೋವು ಮಾಡಿಕೊಂಡರೆ ಅದರ ಪರಿಣಾಮ ಮಕ್ಕಳ ಮೇಲಾಗುತ್ತದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ (ಆಡಳಿತ) ಬಸವರಾಜು ಮಾತನಾಡಿ, ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊಡಗು ರಾಜ್ಯಕ್ಕೆ ಮೊದಲು ಅಥವಾ 2ನೇ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಹಿಂದಿನ ವರ್ಷಳಿಗೆ ಹೋಲಿಸಿದರೆ ಶೇಕಡವಾರು ಫಲಿತಾಂಶ ಗಣನೀಯವಾಗಿ ಹೆಚ್ಚಾದರೂ ಸ್ಥಾನ ಪಲ್ಲಟ ಆಗಿದೆ. ಎಲ್ಲಿ ಎಡವಿದ್ದೇವೆ ಎನ್ನುವುದರ ಅರಿವು ಆಗಿದೆ. ಮುಂದೆ ಈ ತಪ್ಪು ಆಗುವುದಿಲ್ಲ. ಕೊಡಗಿನಲ್ಲಿ ಶಿಕ್ಷಕರಿಗೆ ನಕಲು ಎನ್ನುವುದು ಗೊತ್ತಿಲ್ಲ. ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಪಿಯುಸಿಗೆ ಹೋಲಿಸಿದರೆ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣ ಪ್ರಮಾಣ ಕಡಿಮೆ. ಶಿಕ್ಷಕರ ಜವಾಬ್ದಾರಿ ಈಗ ಜಾಸ್ತಿ ಆಗಿದೆ. 2027 ಮಾರ್ಚ್ಗೆ ಶಿಕ್ಷಕರು ಈಗಲೇ ಸಿದ್ಧರಾಗಬೇಕು. ಮುಂದಿನ ವರ್ಷ ಎಲ್ಲಾ 140 ಶಾಲೆಗಳಲ್ಲಿ ಶೇ.100 ಫಲಿತಾಂಶ ತೋರಿಸಬೇಕು ಎಂದರು.
ಆಶಯ ಭಾಷಣ ಮಾಡಿದ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹಂಡ್ರAಗಿ ನಾಗರಾಜ್, ಶಿಕ್ಷಣ ಇಲಾಖೆ ಇಂದು 24*7 ಕೆಲಸ ನಿರ್ವಹಿಸುವ ವಾತಾವರಣ ಇದೆ. ಒಂದು ಶಾಲೆಗೆ ಶೇ. 100 ಫಲಿತಾಂಶ ತರುವುದು ಸುಲಭವಲ್ಲ. ಸರ್ಕಾರಿ ಶಾಲೆಗಳಲ್ಲಂತೂ ಇದು ಇನ್ನೂ ಕಷ್ಟ. ಕೊಡಗಿನಲ್ಲಿ ಶಿಕ್ಷಕರು ಆತ್ಮತೃಪ್ತಿಯ ಕೆಲಸ ಮಾಡುತ್ತಾರೆ. ಈ ಶ್ರಮ ಇಲ್ಲಿಗೆ ನಿಲ್ಲಬಾರದು. ಶೇ. 100 ಫಲಿತಾಂಶ ಮುಂದೆಯೂ ನಮ್ಮೆಲ್ಲರ ಗುರಿ ಆಗಬೇಕು. ಅನುದಾನ ರಹಿತ ಶಾಲೆಗಳ ಫಲಿತಾಂಶಕ್ಕೆ ಹೋಲಿಸಿದರೆ ಅನುದಾನಿತ, ಸರ್ಕಾರಿ ಶಾಲೆಗಳ ಫಲಿತಾಂಶ ಕಡಿಮೆ ಆಗಿದೆ. ಹಾಗಾಗಿ ಅನುದಾನಿತ, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದರಿಂದಾಗಿ ಶಿಕ್ಷಕರು ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಎಲ್ಲಾ ಸವಾಲುಗಳ ಮಧ್ಯೆ ಮುಂದೆಯೂ ಇಂಥದ್ದೇ ಫಲಿತಾಂಶ ಎಲ್ಲರ ನಿರೀಕ್ಷೆ ಆಗಿದೆ ಎಂದು ಹೇಳಿದರು.
ಕುಶಾಲನಗರ ರೋಟರಿ ಸಂಸ್ಥೆ ಸಹಾಯಕ ಪ್ರಾಂತಪಾಲ ಎಂ.ಡಿ. ರಂಗಸ್ವಾಮಿ ಮಾತನಾಡಿ ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸುವ ಅಗತ್ಯವಿದೆ. ಬಹುಭಾಷಾ ಸಂಸ್ಕೃತಿಯ ಕೊಡಗಿನಲ್ಲಿ ಕನ್ನಡ ಭಾಷೆಯ ಬೆಳೆವಣಿಗೆ ಹಲವರು ಸಹಕರಿಸಿದ್ದಾರೆ. ಎಲ್ಲರನ್ನೂ ಸ್ಮರಿಸುವ ಕೆಲಸ ಆಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ವಿದ್ಯೆ ಕಲಿಸುವ ಶಿಕ್ಷಕರ ಋಣ ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಅಂಥದ್ದರಲ್ಲಿ ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬರುವಲ್ಲಿ ಕಾರಣಿಕರ್ತರಾದ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಇಂಥ ಶಾಲೆಗಳಿಗೆ ಒಟ್ಟು 2 ಸಾವಿರ ಪುಸ್ತಕಗಳನ್ನು ದಾನಿಗಳ ನೆರವಿನಿಂದ ಕೊಡುಗೆಯಾಗಿ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಶೇ.100 ಫಲಿತಾಂಶ ದಾಖಲಿಸುವ ಶಾಲೆಗಳಿಗೆ ತಲಾ 100 ಪುಸ್ತಕಗಳನ್ನು ಕೊಡಲಾಗುವುದು ಎಂದರು.
ಡಯಟ್ ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್, ಮಡಿಕೇರಿ ಡಿಡಿಪಿಐ ಆರ್.ಪಿ. ಮಹೇಶ್, ಸೋಮವಾರಪೇಟೆ ಡಿಡಿಪಿಐ ಕೃಷ್ಣಪ್ರಸಾದ್, ಜಿಲ್ಲಾ ಸಹಶಿಕ್ಷರ ಸಂಘದ ಅಧ್ಯಕ್ಷ ಹೆಚ್.ಜಿ. ಕುಮಾರ್, ಮಡಿಕೇರಿ ತಾಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಪಿ. ರವಿಕೃಷ್ಣ, ಸೋಮವಾರಪೇಟೆ ತಾಲೂಕು ಸಹಶಿಕ್ಷಕಕರ ಸಂಘದ ಅಧ್ಯಕ್ಷ ಟಿ.ಆರ್. ರತ್ನಕುಮಾರ್, ವಿರಾಜಪೇಟೆ ತಾಲೂಕು ಸಹಶಿಕ್ಷಕಕರ ಸಂಘದ ಕಾರ್ಯದರ್ಶಿ ಅರುಣ ನ್ಯಾನ್ಸಿ ಡಿಸೋಜ, ಸಾಹಿತಿಗಳಾದ ಮೊಣ್ಣಂಡ ಶೋಭಾ ಸುಬ್ಬಯ್ಯ, ಕಿಗ್ಗಾಲು ಗಿರೀಶ್, ಪಿ.ಎಸ್. ವೈಲೇಶ್, ಮಡಿಕೇರಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಉ.ರಾ. ನಾಗೇಶ್, ಉಷಾರಾಣಿ ಇದ್ದರು.