ಕೊಡಗು ವಿದ್ಯಾಲಯದಲ್ಲಿ ನಡೆದ 25ನೇ ವರ್ಷದ ಅಂತರ್-ಶಾಲಾ ಚೆಸ್ ಪಂದ್ಯಾವಳಿಯನ್ನು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ಚಿನ್ಮಯಿ ಚಕ್ರವರ್ತಿ ಉದ್ಘಾಟಿಸಿದರು. ಬಿ.ಜಿ. ಅನಂತಶಯನ, ಶಂಕರ್ ನಾರಾಯಣ, ಸಿ.ಎಸ್. ಗುರುದತ್, ಕೆ. ಎಸ್. ಸುಮಿತ್ರಾ, ಪಿ. ರವಿ ಇದ್ದರು. 
ಕೊಡಗು

ಕೊಡಗು ವಿದ್ಯಾಲಯದಲ್ಲಿ ಚೆಸ್ ಪಂದ್ಯಾವಳಿ

ಮಡಿಕೇರಿ:
ಕೊಡಗು ವಿದ್ಯಾಲಯದಲ್ಲಿ 25ನೇ ವರ್ಷದ ಅಂತರ್-ಶಾಲಾ ಚೆಸ್ ಪಂದ್ಯಾವಳಿಗೆ ಶಾಲೆಯ ಬಿ.ಕೆ. ಸುಬಯ್ಯ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ಚಿನ್ಮಯಿ ಚಕ್ರವರ್ತಿ ಮಾತನಾಡಿ, ಚೆಸ್ ಕೇವಲ ಆಟವಲ್ಲ. ಅದು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾರ್ಕಿಕ ಚಿಂತನೆ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಬೌದ್ಧಿಕ ಕ್ರೀಡೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಚೆಸ್‌ನಂತಹ ಕೌಶಲ್ಯಾಧಾರಿತ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ತಾಳ್ಮೆ ಮತ್ತು ಏಕಾಗ್ರತೆ ಅತ್ಯಗತ್ಯವಾಗಿದೆ. ಚೆಸ್ ಆಟ ವಿದ್ಯಾರ್ಥಿಗಳಲ್ಲಿ ಚಿಂತನಶಕ್ತಿ, ಯೋಜನಾ ಸಾಮರ್ಥ್ಯ, ಸಹನೆ ಹಾಗೂ ಸಮಸ್ಯೆಗಳನ್ನು ವಿಶ್ಲೇಷಿಸುವ ಕೌಶಲ್ಯ ವೃದ್ಧಿಸುತ್ತದೆ ಎಂದು ಹೇಳಿದರು.
ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ರಚಿಸಿರುವ ಹೌ ಟು ಇಂಪ್ರೂವ್ ಚೆಸ್ ಕೃತಿಯನ್ನು ಇದೇ ಸಂದರ್ಭ ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ಚೆಸ್ ಕ್ಷೇತ್ರಕ್ಕೆ ಶಂಕರ್ ನಾರಾಯಣ ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಅವರನ್ನು ಸನ್ಮಾನಿಸಲಾಯಿತು.
ಕೊಡಗು ಜಿಲ್ಲೆಯ 18 ಶಾಲೆಗಳಿಂದ ಒಟ್ಟು 120 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಮೂರು ದಿನಗಳ ಕಾಲ ವಿವಿಧ ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಶಾಲಾ ಸಮಿತಿ ಸದಸ್ಯ ಸಿ.ಎಸ್. ಗುರುದತ್, ಪ್ರಾಂಶುಪಾಲೆ ಕೆ. ಎಸ್. ಸುಮಿತ್ರಾ, ಆಡಳಿತ ಮುಖ್ಯಸ್ಥ ಪಿ. ರವಿ, ಶಿಕ್ಷಕಿ ಸೋನಾ ಮುತ್ತಮ್ಮ, ಕೆ.ಕೆ. ಭಾರತಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು ಇದ್ದರು.