ಸೋಮವಾರಪೇಟೆ ತಾಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಕಾಫಿ ತೋಟದ ಅಂಚಿನ ಅರಣ್ಯ ಭಾಗದಲ್ಲಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೋನು ಅಳವಡಿಸಿರುವುದು. 
ಕೊಡಗು

ಗೆಜ್ಜೆ ಹಣಕೋಡು ಗ್ರಾಮದಲ್ಲಿ ಚಿರತೆ

ಎ. ಆರ್. ರಘುರಾಮ

ಪ್ರಮುಖ ಮುಖ್ಯಾಂಶಗಳು

  • ಸೋಮವಾರಪೇಟೆ : ತಾಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಮನೆಯ ಅಂಗಳದಲ್ಲೇ ಚಿರತೆ - ಗ್ರಾಮಸ್ಥರು ಆತಂಕ
ಸೋಮವಾರಪೇಟೆ : ತಾಲೂಕಿನ ಗೆಜ್ಜೆ ಹಣಕೋಡು ಗ್ರಾಮದ ಮನೆಯ ಅಂಗಳದಲ್ಲೇ ಚಿರತೆ ಪ್ರತ್ಯಕ್ಷಗೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಮಂಗಳವಾರ ರಾತ್ರಿ 7.30 ರ ಸಮಯಕ್ಕೆ ಗ್ರಾಮದ ಉದಯ ಎಂಬವರ ಮನೆ ಅಂಗಳದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಕಂಡ ಗೃಹಿಣಿ ವಿದ್ಯಾ ಬೊಬ್ಬೆ ಹೊಡೆದ ಸಂದರ್ಭ ಚಿರತೆ ಪೊದೆ ಕಡೆಗೆ ಓಡಿದೆ. ಚಿರತೆ ಬಂದಿದ್ದ ದೃಶ್ಯ ಮನೆಯ ಮುಂಭಾಗದಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ
ಸೆರೆಯಾಗಿದೆ. ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸುರಕ್ಷಿತವಾಗಿರುವ ಕಾರಣ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಚಿರತೆ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಕಾರೆಕೊಪ್ಪ ಗ್ರಾಮದಲ್ಲಿ ನಾಯಿ ಮತ್ತು ಕರುವನ್ನು ಚಿರತೆ ಕಚ್ಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ಬೋನು ಅಳವಡಿಕೆ:
ಬುಧವಾರ ಸ್ಥಳಕ್ಕೆ ಆರ್‌ಎಫ್‌ಒ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಒ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೆಜ್ಜೆ ಹಣಕೋಡು ಗ್ರಾಮದ ರಸ್ತೆ ಬದಿಯಲ್ಲಿ ಹಾಗು ಬೇಳೂರು ಮುರುಘ ರಾಜೇಂದ್ರ ಮಠದ ತೋಟದ ಅಂಚಿನ ಅರಣ್ಯ ಭಾಗದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.