ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2026 ರ ಅಂಗವಾಗಿ ಹೆಲ್ದಿ ಹ್ಯಾಬಿಟ್ಸ್ - ಹ್ಯಾಪಿ ಲೈಫ್‌ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಾಲೇಜಿನ ಮಹಿಳಾ ಸ್ವಚ್ಛತಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಡಾ. ಕೆ.ಜಿ. ಶುಭಾ, ಮೇಪಾಡಂಡ ಸವಿತಾ ಕೀರ್ತನ್, ಮೇ. ಪ್ರೊ. ರಾಘವ ಬಿ., ಪ್ರೊ. ನಯನಾ ಕಶ್ಯಪ್ ಮತ್ತಿತರರು ಇದ್ದರು. 
ಕೊಡಗು

ಚಾಟ್ ಜಿಪಿಟಿಯಿಂದ ಕ್ರಿಯಾಶೀಲತೆ ನಾಶ

ಮಡಿಕೇರಿ:
ಚಾಟ್ ಜಿಪಿಟಿಯಂಥ ತಾಂತ್ರಿಕ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ನಮ್ಮ ಮನಸ್ಸಿನ ಕ್ರಿಯಾಶೀಲತೆಯೇ ನಾಶ ಆಗುತ್ತದೆ ಎಂದು ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಕೆ.ಜಿ. ಶುಭಾ ಹೇಳಿದರು. ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಕಾಲೇಜಿನ ಮಹಿಳಾ ಘಟಕ, ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2026 ರ ಅಂಗವಾಗಿ ಹೆಲ್ದಿ ಹ್ಯಾಬಿಟ್ಸ್ - ಹ್ಯಾಪಿ ಲೈಫ್‌ವಿಷಯದ ಕುರಿತು ಗುರುವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಚಾಟ್ ಜಿಪಿಟಿಯಂಥ ತಾಂತ್ರಿಕ ಮಾಧ್ಯಮಗಳ ಹೆಚ್ಚಿನ ಬಳಕೆ ಮೆದುಳಿನ ಮೇಲೆ ದುಷ್ಪ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಎಐ, ಜಿಪಿಟಿಯಂಥ ಮಾಧ್ಯಮವನ್ನು ಬಳಸುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಬೇಕು.
ಯೌವನದಲ್ಲಿ ಯುವತಿಯರು ಚರ್ಮ ಸಂರಕ್ಷಣೆಗೆ ಸಂಬAಧಿಸಿದAತೆ ಹೆಚ್ಚು ಜಾಗ್ರತೆ ವಹಿಸುವ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವಿಸಬೇಕು. ಆಯಾಯ ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವನೆಯೂ ಯೌವನದಲ್ಲಿ ಮುಖ್ಯವಾಗುತ್ತದೆ. ಮೊಬೈಲ್ ಬಳಕೆ ಹೆಚ್ಚಾದಂತೆ ಇದು ಯುವಪೀಳಿಗೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕವಾಗಿಯೂ ಮೊಬೈಲ್‌ನ ಅತೀ ಬಳಕೆ ಗಂಭೀರ ಪರಿಣಾಮ ಬೀರುತ್ತದೆ. ಹಿಂದಿನ ಕಾಲದಲ್ಲಿ ಸಂಸ್ಕೃತಿ, ಸಂಪ್ರದಾಯಕ್ಕೆ ಮನೆಗಳಲ್ಲಿ ಹೆಚ್ಚು ಆದ್ಯತೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬ ವರ್ಗದ ಆರೋಗ್ಯ ಉತ್ತಮವಾಗಿರುತ್ತಿತ್ತು. ನಮ್ಮ ದೇಹಕ್ಕೆ ನಾವೇ ಚಾಲಕರಂತೆ. ಹೀಗಾಗಿ ನಮ್ಮ ದೇಹದ ಆರೋಗ್ಯದ ಕಾಳಜಿಯನ್ನು ನಾವೇ ಸೂಕ್ತವಾಗಿ ನಿರ್ವಹಿಸಬೇಕು. ಕಾಯಿಲೆಗಳಿಂದ ಮುಕ್ತವಾಗಿರುವ ಶರೀರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೌವನದಲ್ಲಿಯೇ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹನಿರ್ದೇಶಕಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ವಿದ್ಯಾರ್ಥಿಗಳು ಹೇಗೆ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ, ಮೊಬೈಲ್ ದುರ್ಬಳಕೆಯಿಂದ ದಿಕ್ಕು ತಪ್ಪುತ್ತಿದ್ದಾರೆ ಎಂದು ವಿವರಿಸಿ, ಜೀವನದಲ್ಲಿ ತೆಗೆದುಕೊಳ್ಳಬೇಕಾದ ಸರಿಯಾದ ನಿರ್ಧಾರಗಳು ಮತ್ತು ಪೌಷ್ಠಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಿದರು. ಕರ್ನಾಟಕ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಾರಿಗೆ ತಂದಿರುವ ವಿಶೇಷ ಪೊಲೀಸ್ ಪಡೆಯಾದ ಅಕ್ಕ ಪಡೆಯ ಬಗ್ಗೆಯೂ ಮಾಹಿತಿ ನೀಡಿದರು.
ಕಾಲೇಜು ಪ್ರಾಂಶುಪಾಲ ಮೇ. ಪ್ರೊ. ರಾಘವ ಬಿ. ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನದ ಆಚರಣೆಗೆ ಸೀಮಿತವಾಗಿರಬಾರದು. ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಪ್ರತಿನಿಧಿತ್ವ ಮಹತ್ವದ್ದಾಗಿದೆ, ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸ್ತ್ರೀಯ ಮಹತ್ವ ತಿಳಿಯುವ ಅಗತ್ಯ ಇದೆ ಎಂದು ಹೇಳಿದರು.
ಕಾಲೇಜಿನ ಮಹಿಳಾ ಘಟಕದ ಸಂಯೋಜಕಿ ಪ್ರೊ. ನಯನಾ ಕಶ್ಯಪ್ ಮಾತನಾಡಿ ಮಹಿಳೆ ಈವರೆಗೆ ಸಾಗಿಬಂದ ಹೋರಾಟದ ಹಾದಿ ಒಂದೆಡೆಯಾದರೆ ಇಂದಿನ ಶತಮಾನದ ಮಹಿಳೆ ಹೊಸ ಸವಾಲುಗಳನ್ನು ಎದುರಿಸುವ ಅನಿವಾರ್ಯ ಇನ್ನೊಂದೆಡೆ ಇದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವ ಯುವತಿ ಮಾನಸಿಕ, ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಸಮತೋಲನವನ್ನು ಎಚ್ಚರದಿಂದ ಕಾಪಾಡಿಕೊಳ್ಳಬೇಕಾದ ತುರ್ತು ನಿರ್ಮಾಣ ಆಗಿದೆ ಎಂದರು.
ಈ ಸಂದರ್ಭ ಕಾಲೇಜಿನ ಮಹಿಳಾ ಸ್ವಚ್ಛತಾ ಸಿಬ್ಬಂದಿಯ ಅವಿರತ ಶ್ರಮ, ಸೇವೆ ಗುರುತಿಸಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ತಾವು ಯಾವುದೇ ದುಶ್ಚಟಗಳಿಗೆ ಒಳಗಾಗುವುದಿಲ್ಲ ಹಾಗೂ ಆರೋಗ್ಯಕರ ಜೀವನ ನಡೆಸುತ್ತೇವೆ ಎಂದು ಕಾರ್ಯಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಪ್ರತಿಜ್ಞೆ ಸ್ವೀಕರಿಸಿದರು.
ರಾಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಪ್ರೊ. ಗಾಯತ್ರಿ ದೇವಿ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎ. ಎನ್. ಗಾಯತ್ರಿ, ರಾಜ್ಯ ಶಾಸ್ತ್ರ ವಿಭಾಗದ ಡಾ. ಶೃಂಗಾರ್, ಕಾಲೇಜಿನ ಬೋಧಕರಾದ ಆಲೋಕ್ ಬಿಜೈ, ಯೋಗಾನಂದ, ಶರತ್, ಡಾ. ಭೈರವಿ, ಕನ್ನಿಕಾ ಪ್ರಕಾಶ್, ಡಾ. ವಿಜಯಲತಾ, ದೇವಮ್ಮ, ಡಾ. ಅಮೃತ, ಡಾ. ನಳಿನಿ, ಸಪ್ನಾ ಶೇಠ್, ಚೋಂದಮ್ಮ ಇದ್ದರು.