ಭಾನುವಾರ ಕೇಂದ್ರ ಬಜೆಟ್ ಮಂಡಿಸಲಾಯಿತು 
ಕೊಡಗು

ಅಭಿವೃದ್ಧಿ ಮಂತ್ರ ಜಪ

ಸುನಿಲ್ ಪೊನ್ನೇಟಿ
ಮಡಿಕೇರಿ
ವಿಕಸಿತ ಭಾರತದ ಗುರಿ ಹೊಂದಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಮಂಡಿಸಿದರು. ನಿರ್ಮಲಾ ಸೀತಾರಾಮನ್ ಅವರದ್ದು ಇದು 9ನೇ ಬಜೆಟ್. ಭಾನುವಾರ ಮಂಡಿಸಿದ 2ನೇ ಬಜೆಟ್ ಕೂಡ ಹೌದು. ಒಟ್ಟಾರೆಯಾಗಿ ಈ ಬಜೆಟ್ ಯುವಕರು, ಮಹಿಳೆಯರು, ಬಡವರು ಹಾಗೂ ರೈತರ ಅಭಿವೃದ್ಧಿ ಕೊಟ್ಟಿರುವ ಬಜೆಟ್ ಎಂದು ವಿಶ್ಲೇಷಿಸಲಾಗುತ್ತಿದೆ. ಮೂಲಸೌಕರ್ಯ, ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳಿಗೂ ಆದ್ಯತೆ ಕೊಡಲಾಗಿದೆ.
ನಿರ್ದಿಷ್ಟವಾಗಿ ಇಂಥ ಜಿಲ್ಲೆಗಳಿಗೆ ಇಂಥ ಯೋಜನೆ ಎಂದು ಬಜೆಟ್‌ನಲ್ಲಿ ಹೇಳಿಲ್ಲವಾದರೂ ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ವಸತಿ ನಿಲಯ ಸ್ಥಾಪನೆ. ಜಿಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಆಘಾತ ಚಿಕಿತ್ಸಾ ಕೇಂದ್ರಗಳ ಸಾಮರ್ಥ್ಯ ಶೇ. 50ರಷ್ಟು ಹೆಚ್ಚಳ, ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ 15ನೇ ಹಣಕಾಸು ಆಯೋಗದಡಿ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತಗಳಿಗೆ ಅನುದಾನ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ಗಳ ಕ್ರಿಯಾಶೀಲತೆಗೆ ಒತ್ತು ನೀಡಿರುವಂಥ ಕ್ರಮಗಳಿಂದ ಕೊಡಗಿಗೂ ಪ್ರಯೋಜನ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಮಹಿಳಾ ಉದ್ಯಮಿಗಳಿಗಾಗಿ ಶೀ ಮಾರ್ಟ್, ಖೇಲೋ ಇಂಡಿಯಾ ಮಿಷನ್ ಘೋಷಣೆ, 20 ಸಾವಿರ ಯುವಕರಿಗೆ ಪ್ರವಾಸೋದ್ಯಮ ಮಾರ್ಗದರ್ಶಕ ಉದ್ಯೋಗ, ಎಂಎಸ್‌ಎAಇಗಳಿಗೆ ದೊಡ್ಡ ಮೊತ್ತದ ಅನುದಾನ ಘೋಷಣೆ ಮತ್ತಿತರ ಅಂಶಗಳೂ ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾಗಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಲೌಡ್‌ಸ್ಪೀಕರ್‌ನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯ ಹಂಚಿಕೊAಡಿದ್ದಾರೆ.
"

9ನೇ ಬಾರಿ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ದೇಶವೇ ಮೆಚ್ಚುವಂಥ ಬಜೆಟ್ ಕೊಟ್ಟಿದ್ದಾರೆ. ಯಾವುದೇ ವ್ಯಯಕ್ತಿಕ ಪ್ರಯೋಜನದ ಯೋಜನೆಗಳಿಗಿಂತ ಎಲ್ಲಾ ವರ್ಗ ಮತ್ತು ಸಮುದಾಯದ ಭವಿಷ್ಯ ರೂಪಿಸುವುದಕ್ಕೆ ಅನುಕೂಲ ಆಗುವ ರೀತಿಯಲ್ಲಿ ಈ ಬಜೆಟ್ ಇದೆ. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕೂ ಆದ್ಯತೆ ಕೊಡಲಾಗಿದೆ. ಬೆಂಗಳೂರು ಸೇರಿ 7 ಪ್ರಮುಖ ನಗರಗಳಿಗೆ ವೇಗದ ಸಂಪರ್ಕ ಕಲ್ಪಿಸುವ ವೇಗದ ರೈಲು ಸಂಪರ್ಕ ಯೋಜನೆಯೂ ಸ್ವಾಗತಾರ್ಹ. ತೆರಿಗೆ ಹೆಚ್ಚು ಮಾಡದಿರುವುದು ಕೂಡ ಉತ್ತಮ ಬೆಳವಣಿಗೆ. ರಕ್ಷಣಾ ಕ್ಷೇತ್ರಕ್ಕೂ ಆದ್ಯತೆ ಕೊಡಲಾಗಿದೆ.

"

ಇದು ವಿಕಸಿತ ಭಾರತಕ್ಕೆ ಪೂರಕವಾದ ಅಭಿವೃದ್ಧಿ ಆಧಾರಿತ ಬಜೆಟ್ ಆಗಿದೆ. ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಇದರಿಂದ ಸಹಕಾರಿ ಆಗುತ್ತದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಇದಾಗಿದ್ದು ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿ ಸೇರಿದಂತೆ ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಎಐ ತಂತ್ರಜ್ಞಾನಕ್ಕೆ ಒತ್ತುಕೊಡಲು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ ಸಂಬAಧಿಸಿದAತೆ 1ಲಕ್ಷದ62 ಸಾವಿರ ಕೋಟಿ ರೂ. ಕೊಟ್ಟಿರುವುದರಿಂದ ಗೊಬ್ಬರ ಬೆಲೆ ಇಳಿಯಲಿದೆ. ವಿಮೆ ಮೇಲೆ ತೆರಿಗೆ ಕಡಿಮೆ ಮಾಡಿರುವುದು ಉತ್ತಮ ಬೆಳವಣಿಗೆ. ಹೈಸ್ಪೀಡ್ ರೈಲು ಯೋಜನೆಯಿಂದ ಹೆಚ್ಚಿನ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಆರೋಗ್ಯ ಕ್ಷೇತ್ರಕ್ಕೂ ಒತ್ತುಕೊಡಲಾಗಿದೆ. ಉದ್ಯೋಗವಕಾಶ ಹೆಚ್ಚಳದ ನಿರೀಕ್ಷೆ ಇಟ್ಟುಕೊಳ್ಳಬಹುದು.

"

ಎನ್‌ಡಿಎ ಮೈತ್ರಿಕೂಟ ಇರುವ ರಾಜ್ಯಗಳ ಮತ್ತು ಮುಂದೆ ಚುನಾವಣೆ ಬರುವ ರಾಜ್ಯಗಳ ಪ್ರಣಾಳಿಕೆಯಂತೆ ಈ ಬಜೆಟ್ ಕಂಡು ಬರುತ್ತಿದೆ. ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವುದನ್ನೇ ಕರ್ನಾಟಕ ಬಿಟ್ಟುಬಿಟ್ಟಿದೆ. ಆದರೂ 16ನೇ ಹಣಕಾಸು ಆಯೋಗ ನಮ್ಮ ಕೂಗು ಕೇಳುತ್ತದೆ, ಜಿಎಸ್‌ಟಿ ಹಂಚಿಕೆಯಲ್ಲಿ ಆದ ಅನ್ಯಾಯ ಸರಿಯಾಗುತ್ತದೆ, ಹಳೆಯ ಬಜೆಟ್‌ನಲ್ಲಿ ಘೋಷಣೆಗಳು ಕೊಡುತ್ತಾರೆ, ಪ್ರಾಕೃತಿಕ ವಿಕೋಪ ಪರಿಹಾರದ ತಾರತಮ್ಯ ನಿವಾರಣೆ ಆಗುತ್ತದೆ ಎನ್ನುವ ಆಸೆ ಇತ್ತು. ಅದೆಲ್ಲಾ ಈಗ ಭಗ್ನವಾಗಿದೆ. ದೇಶದ ಜನತೆಯ ನಿರೀಕ್ಷೆಯೂ ಹುಸಿಯಾಗಿದೆ. ಪರಿಸರ ಮಾಲಿನ್ಯ, ಅರಣ್ಯ ಸಂರಕ್ಷಣೆ, ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಗಮನ ಹರಿಸಿಲ್ಲ. ದೇಶದ ಸಾಲದ ಪರಿಸ್ಥಿತಿಯೂ ಗಂಭೀರವಾಗಿದೆ. ಬಜೆಟ್‌ನಲ್ಲಿ ಭಾಷೆ ಬಳಕೆ ಮಾತ್ರ ಜನರ ಭಾವನೆಗೆ ಸ್ಪಂದಿಸುವ ರೀತಿಯಲ್ಲಿ ಇದೆ ಹೊರತುಪಡಿಸಿದರೆ ಬಜೆಟ್‌ನಿಂದ ಬೇರೇನೂ ಸಿಕ್ಕಿಲ್ಲ.

"

ಈ ಬಜೆಟ್ ದೇಶವನ್ನು ಸಂಪೂರ್ಣ ಸಾಲದಲ್ಲಿ ಮುಳುಗಿಸುವಂತೆ ಕಂಡು ಬರುತ್ತಿದೆ. ಇದೊಂದು ನಿರಾಸದಾಯಕ ಬಜೆಟ್ ಆಗಿದೆ. ಕರ್ನಾಟಕಕ್ಕೆ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ವಂದೇ ಭಾರತ್ ರೈಲು ಘೋಷಿಸಿದ್ದರೂ ಬಡವರಿಗೆ ಇದರಿಂದ ಯಾವುದೇ ಪ್ರಯೋಜನ ಇಲ್ಲ. ಕೊಡಗಿನ ಜನರಿಗೆ ಪ್ರಯೋಜನ ಆಗುವ ಯೋಜನೆಗಳೂ ಇದ್ದಂತಿಲ್ಲ. ರಾಜ್ಯಗಳಿಗೆ ಕೊಡಬೇಕಾದ ಹಣ ಕೊಡದೇ ಸಾಲ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ದೇಶದಲ್ಲೂ ಸಾಲ ಮಾಡಲು ಹೊರಟಿದ್ದಾರೆ.