ವಿರಾಜಪೇಟೆಯಲ್ಲಿ ಗೋಂದಳಿ ಸಮಾಜದಿಂದ ಚಾಮುಂಡಿ ಉತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ವಿರಾಜಪೇಟೆ: ಇಲ್ಲಿನ ಮಹಿಳಾ ಸಮಾಜದಲ್ಲಿ ಗೋಂದಳಿ ಸಮಾಜದಿಂದ ಆಷಾಢ ಮಾಸದ ಪ್ರಯುಕ್ತ ಮೂರು ದಿನ ಆಯೋಜಿಸಿದ್ದ ಚಾಮುಂಡಿ ಉತ್ಸವ ಬುಧವಾರ ಸಂಪನ್ನಗೊಂಡಿತು.
ಸೋಮವಾರ ಬೆಳಗ್ಗೆ ಗಣಪತಿ ಹೋಮ ಹಾಗೂ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು. ರಾತ್ರಿ ಪೂಜೆ ಕಾರ್ಯಕ್ರಮದ ಬಳಿಕ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಮಂಗಳವಾರ ರಾತ್ರಿ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಸೇವೆ ನಡೆದವು. ಬುಧವಾರ ಬೆಳಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಚಾಮುಂಡಿ ದೇವಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಿ ಪಟ್ಟಣದ ಇತಿಹಾಸ ಪ್ರಸಿದ್ಧ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ನಂತರ ಮಹಿಳಾ ಸಮಾಜದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಗೋಂದಳಿ ಸಮಾಜ ಅಧ್ಯಕ್ಷ ಡಿ.ರಾಮಚಂದ್ರ, ಉಪಾಧ್ಯಕ್ಷ ರಾದ ಕೆ.ಕುಮಾರ್, ಕಾರ್ಯದರ್ಶಿ ರಜನಿ, ಸದಸ್ಯ ಗಣೇಶ್ , ಯೋಗೇಶ್, ಸಯೋಜಿ ರಾವ್ ಸೇರಿದಂತೆ ಗೋಂದಳಿ ಸಮಾಜದ ಸದಸ್ಯರು ಇದ್ದರು.