ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೩೧ನೇ ವರ್ಷದ ಕೊಡವ ಸಾಂಪ್ರದಾಯಿಕ ಕಕ್ಕಡ ಪದ್ನೆಟ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಾಚಪ್ಪ, ದೀಪಕ್ ತಿಮ್ಮಯ್ಯ, ಮನೋಜ್ ಮಂದಣ್ಣ ಇತರರಿದ್ದರು.
- ಕೊಡವ ಭೂಮಿ ಕಳೆದುಕೊಂಡರೆ ಕೊಡವರ ಅಸ್ತಿತ್ವಕ್ಕೆ ದಕ್ಕೆ
- ೩೧ನೇ ವರ್ಷದ ಸಂಭ್ರಮದ ಕಕ್ಕಡ ಪದ್ನೆಟ್ ಆಚರಣೆಯಲ್ಲಿ ದೀಪಕ್ ತಿಮ್ಮಯ್ಯ ಆತಂಕ
ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ೩೧ನೇ ವರ್ಷದ ಕೊಡವ ಸಾಂಪ್ರದಾಯಿಕ ಕಕ್ಕಡ ಪದ್ನೆಟ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‌ನಲ್ಲಿ ನಡೆದ ಕಕ್ಕಡ ಪದ್ನೆಟ್ ಹಬ್ಬವನ್ನು ಕೊಡವ ಪರಂಪರೆಯ ಪವಿತ್ರ ಮಂದ್‌ನಲ್ಲಿ ಆರಂಭಿಸಲಾಯಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಪ್ರಮುಖರಾದ ದೀಪಕ್ ತಿಮ್ಮಯ್ಯ ಹಾಗೂ ಮಂದಪಂಡ ಮನೋಜ್ ಮಂದಣ್ಣ ಅವರು ಪೂರ್ವಜರ ಗೌರವ ಸೂಚಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದರು. ನಂತರ ಬಾಳೆಕಂಬ ಕತ್ತರಿಸುವ ಬಾಳೆಬೆಂಗುವ ವಿಧಿಯನ್ನು ನೆರವೇರಿಸಲಾಯಿತು.
ಮೆರವಣಿಗೆಯ ಮೂಲಕ ಭತ್ತದ ಗದ್ದೆಗೆ ತೆರಳಿದ ನಾಚಪ್ಪ ಅವರು ಕೃಷಿ ಋತುವಿನ ಆರಂಭವನ್ನು ಸೂಚಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು. ಸಿಎನ್‌ಸಿ ಸದಸ್ಯರು, ಸ್ವಯಂಸೇವಕರು ಹಾಗೂ ಕೊಡವ, ಕೊಡವತಿಯರು ಸಾಂಪ್ರದಾಯಿಕವಾಗಿ ಭತ್ತದ ನಾಟಿ ಕಾರ್ಯ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದಿನ ಉಪ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಮತ್ತು ರಾಜಕೀಯ ಸಲಹೆಗಾರ ದೀಪಕ್ ತಿಮ್ಮಯ್ಯ ಮಾತನಾಡಿ, ಕೊಡವ ಭೂಮಿಯನ್ನು ಕಳೆದುಕೊಂಡರೆ ಮುಂದೆ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಲಿದೆ. ಕೊಡವ ಭೂಮಿಯೇ ಕೊಡವರ ಆತ್ಮವಾಗಿದೆ. ಕೊಡವ ಉಡುಗೆ ತೊಡುಗೆ ತೊಟ್ಟು ನೃತ್ಯವನ್ನು ಪ್ರದರ್ಶಿಸುವುದರಿಂದ ಮಾತ್ರ ಕೊಡವ ಗುರುತನ್ನು ನಿರ್ಧರಿಸಲು ಸಾಧ್ಯವಿಲ್ಲ. ಕೊಡವರ ಆತ್ಮಗೌರವ ಮತ್ತು ನೈತಿಕತೆ ನಮ್ಮ ಪೂರ್ವಿಕರ ಭೂಮಿಯಲ್ಲಿ ನಮ್ಮ ತಾಯ್ನಡಿನಲ್ಲಿ ಮಾತ್ರ ನೆಲೆಸಿದೆ. ಕೊಡವ ಭೂಮಿಯನ್ನು ಕಳೆದುಕೊಂಡರೆ ಕೊಡವರು, ಕೊಡವರನ್ನು ಕಳೆದುಕೊಂಡರೆ ಕೊಡವಲ್ಯಾಂಡ್ ಮತ್ತು ಕೊಡಗು ಇರುವುದಿಲ್ಲ. ಕೊಡವರು ಮತ್ತು ಕೊಡಗು ಪರಸ್ಪರ ಹೆಣೆದುಕೊಂಡಿದೆ. ಅವಿನಾಭಾವ ಸಂಬಂಧ ಹೊಂದಿವೆ. ಕೊಡವರ ಜೀವನಚಕ್ರವು ಭೂಮಿ, ನೀರು ಮತ್ತು ಪ್ರಕೃತಿಯ ಸುತ್ತ ಸುತ್ತುತ್ತದೆ. ನಾವು ಇವುಗಳನ್ನು ಬಿಟ್ಟುಕೊಟ್ಟರೆ ಕೊಡವ ಅಸ್ತಿತ್ವಕ್ಕೆ ದಕ್ಕೆಯಾಗಲಿದೆ. ಕೊಡವ ತಾಯ್ನಡಿನ ಭೂಮಿಯನ್ನು ಕಳೆದುಕೊಂಡರೆ, ನೀವು ಎಲ್ಲಿ ಕೊಡವ ನೃತ್ಯ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಕೊಡವರು ಈ ಮಣ್ಣಿಗೆ ಅಂಟಿಕೊಂಡಿರುವ ಪೂರ್ವಜರನ್ನು ಪೂಜಿಸುವ ಪ್ರಾಚೀನ ಜನಾಂಗೀಯ ಸಮುದಾಯ. ನಮ್ಮ ಪೂರ್ವಜರು ಉನ್ನತ ಮೌಲ್ಯಗಳೊಂದಿಗೆ ಬದುಕಿದ್ದರು. ಇತ್ತೀಚಿನವರೆಗೆ ನಮಗೆ ಗುರಿ-ಕಾರೋಣ ಮಾತ್ರ ತಿಳಿದಿತ್ತು. ಈಗ ಅದನ್ನು ಹೊರಗಿನ ದೇವತೆಗಳಿಂದ ಬದಲಾಯಿಸಲಾಗುತ್ತಿದೆ. ಕೊಡವರು ಅರಿಯದೆ ರಾಜ್ಯದ ಬಹುಸಂಖ್ಯಾತ ಸಮುದಾಯದಲ್ಲಿ ಮುಳುಗಿ ಸಮೀಕರಣಗೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಪ್ರಾಚೀನ, ಮೂಲನಿವಾಸಿ, ಏಕ-ಜನಾಂಗೀಯ, ಪ್ರಕೃತಿ ಆರಾಧನಾ ಕೊಡವರನ್ನು ಭಾರತದ ಸಂವಿಧಾನ ಹಾಗೂ ವಿಶ್ವಸಂಸ್ಥೆಯ ಮೂಲನಿವಾಸಿ ಜನರ ಹಕ್ಕುಗಳ ಘೋಷಣೆಯಡಿಯಲ್ಲಿ ರಕ್ಷಿಸಬೇಕು. ಕೊಡವ ಸ್ಯಾಕ್ರಮೆಂಟ್ ಗನ್/ಥೋಕ್ ಅನ್ನು ಭಾರತದ ಸಂವಿಧಾನದ ೨೫, ೨೬ನೇ ವಿಧಿಗಳು ಆರ್/ಡಬ್ಲ್ಯು ೮ನೇ ಪರಿಚ್ಛೇದದಡಿಯಲ್ಲಿ ಅವಶ್ಯ ಧಾರ್ಮಿಕ ಆಚರಣೆ ಎಂದು ಗುರುತಿಸಿ ಸಂರಕ್ಷಿಸಬೇಕು. ಮೂಲನಿವಾಸಿ ಕೊಡವರ ಮಾತೃಭಾಷೆಯಾದ ಶಾಸ್ತ್ರೀಯ ಕೊಡವ ಭಾಷೆಯನ್ನು ಭಾರತದ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸಬೇಕು. ಪವಿತ್ರ ನೆಲಗಳು, ದೇವರ ಕಾಡುಗಳು, ಮಂದ್‌ಗಳು, ಪವಿತ್ರ ಸ್ಥಳಗಳು, ಜಾನಪದ ಕಲೆಗಳು, ಹಾಡು, ಪರೆಯಕಾಳಿ, ಉಮ್ಮತ್ತಾಟ್, ಕೋಲಾಟ್, ಬೋಳ್ಕಾಟ್ ಸೇರಿದಂತೆ ಕೊಡವರ ಶ್ರೀಮಂತ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಎನ್.ಯು.ನಾಚಪ್ಪ ಅವರು ೧೦ ಅಂಶಗಳ ಸಾಂವಿಧಾನಿಕ ನಿರ್ಣಯವನ್ನು ಮಂಡಿಸಿದರು. ನೆರರೆದಿದ್ದವರು ಸರ್ವಾನುಮತದಿಂದ ಸಹಿ ಮಾಡಿ ನಿರ್ಣಯವನ್ನು ಅಂಗೀಕರಿಸಿದರು. ಗುರು-ಕಾರೋಣ, ಸೂರ್ಯ-ಚಂದ್ರ, ಭೂತಾಯಿ, ಪ್ರಕೃತಿ ಮತ್ತು ಸಂವಿಧಾನದ ಹೆಸರಿನಲ್ಲಿ ಸಿಎನ್‌ಸಿಯ ೩೬ ವರ್ಷಗಳ ಸಾಂವಿಧಾನಿಕ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ಪವಿತ್ರ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೊಡವ ಸಾಂಪ್ರದಾಯಿಕ ನಾಡ್ ಕೋಳಿ ಊಟ, ಮದ್ದ್ ಪಾಯಸ ಮತ್ತು ವಿವಿಧ ಕಕ್ಕಡ ಖಾದ್ಯಗಳನ್ನು ಸವಿದರು.
ಕಾರ್ಯಕ್ರಮದಲ್ಲಿ ಪುಲ್ಲೇರ ಸ್ವಾತಿ, ಅಪ್ಪಚ್ಚಿರ ರೀನಾ, ನಂದೇಟಿರ ಕವಿತಾ, ಚೋ ಳಪಂಡ ಜ್ಯೋತಿ, ನಂದಿನೆರವಂದ ರೇಖಾ, ಪಟ್ಟಮಾಡ ಲಲಿತಾ, ನಂದಿನೆರವಂಡ ಬೀನಾ, ಕೂತಂಡ ಸರ್ಸು ಅಪ್ಪಯ್ಯ, ನಂದಿನೆರವಂಡ ನಿಶಾ, ನಂದಿನೆರವಂಡ ಸುಮಿತ್ರಾ, ಈಳಪಂಡ ಪುಷ್ಪಾ ಉತ್ತಪ್ಪ, ಮೇಷ್ಟ್ರು ಅಪ್ಪಯ್ಯ, ಅಲ್ಮಂಡ ಜೈ ಗಣಪತಿ, ನಂದೇಟಿರ ರವಿ ಸುಬ್ಬಯ್ಯ, ಪೊರಿಮಂಡ ದಿನಮಣಿ ಪೂವಯ್ಯ ಇತರರು ಪಾಲ್ಗೊಂಡಿದ್ದರು.