ವಿರಾಜಪೇಟೆ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಸಿಪಿಐ(ಎಂ) ನಗರ ಘಟಕದ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಯಿತು.
ಸಿಪಿಐ(ಎಂ) ಕಾರ್ಯಕರ್ತರು ಹಾಗೂ ವಿವಿಧ ಜನಪರ ಸಂಘಟನೆಗಳ ಮುಖಂಡರು ಕೆಂಪು ಬಾವುಟಗಳನ್ನು ಹಿಡಿದು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇಶವ್ಯಾಪಿ ಎಸ್ಐಆರ್ ಪ್ರಕ್ರಿಯೆಯಿಂದಾಗಿ ಅನೇಕ ಗಂಭೀರ ಸಮಸ್ಯೆಗಳು ಎದುರಾಗಿದ್ದು, ನೈಜ ಮತದಾರರು ಮತ್ತು ಸಕ್ರಿಯ ಸಂಘಟನೆಗಳ ನಾಯಕರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲಾ ಸಮಿತಿ ಸದಸ್ಯ ಎ.ಸಿ.ಸಾಬು ಮಾತನಾಡಿ, ಚುನಾವಣಾ ಆಯೋಗವು ತನ್ನ ನಿಷ್ಪಕ್ಷಪಾತ ಧೋರಣೆ ತೊರೆದು ಆಡಳಿತಾರೂಢರ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪ್ರಜಾತಂತ್ರದ ಮೂಲ ಆಶಗಳಿಗೆ ಧಕ್ಕೆ ತರುತ್ತಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಬೆಲೆ ಏರಿಕೆ, ಕಾರ್ಮಿಕರ ಮತ್ತು ಶ್ರಮಿಕರ ಶೋಷಣೆ ಹಾಗೂ ಸಾಮಾನ್ಯ ಜನರ ಮೇಲಾಗುತ್ತಿರುವ ಗಂಭೀರ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಪವಿತ್ರ ಹಕ್ಕು ವಂಚನೆ: ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಡಾ.ದುರ್ಗಾ ಪ್ರಸಾದ್ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿದ ಅತ್ಯಂತ ಪವಿತ್ರ ಹಕ್ಕು ಮತದಾನ. ಆದರೆ ಎಸ್ಐಆರ್ ಪ್ರಕ್ರಿಯೆ ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ನೈಜ ಮತದಾರರ ಹೆಸರುಗಳನ್ನು ಏಕಾಏಕಿ ಕೈಬಿಡಲಾಗುತ್ತಿದೆ. ಈ ಗೊಂದಲಗಳಿಗೆ ಮತ್ತು ಅನಾಹುತಗಳಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇರ ಹೊಣೆ ಹೊರಬೇಕು. ಜತೆಗೆ ತಕ್ಷಣ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮುಖಂಡ ಹಾಗೂ ವಕೀಲ ಕೆ.ವಿ.ಸುನಿಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲು ಈ ಹೋರಾಟ ಅನಿವಾರ್ಯವಾಗಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿನ ಕಾನೂನು ತೊಡಕು ನಿಯಮಬಾಹಿರ ಕಾರ್ಯವೈಖರಿಯಿಂದ ದೇಶಾದ್ಯಂತ ಸಾಮಾನ್ಯ ಜನರಿಗೆ ಭಾರಿ ಅನ್ಯಾಯವಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಕಂಟಕ ತರುವ ಇಂತಹ ಹುನ್ನಾರಗಳನ್ನು ಜನಾಂದೋಲನದ ಮೂಲಕ ಎದುರಿಸಬೇಕಿದೆ ಎಂದರು.
ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಎ. ಮಹದೇವ್ ಮಾತನಾಡಿದರು. ರೈತ ಸಂಘಟನೆ ರೈತ ಮುಖಂಡ ಹಮೀದ್, ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎ.ಎಚ್. ಸಾದಿಕ್, ದಲಿತ ಸಂಘಟನೆ ಮುಖಂಡ ಕುಮಾರ್, ಸಿಪಿಐ(ಎಂ) ಶಾಖಾ ಸದಸ್ಯರಾದ ಪಿ. ಖಾಲಿದ್, ಕೆ.ಕೆ. ಹರಿದಾಸ್, ಕೆ.ಎ. ಖಾಸಿಮ್, ಬಾಪುಟ್ಟಿ ಕಾರ್ಯದರ್ಶಿಗಳಾದ ಕೆ.ಎಸ್. ಶಾಜಿ ರಮೇಶ್ ಇತರರು ಇದ್ದರು.