ಕುಶಾಲನಗರದಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕಾಮಗಾರಿಯನ್ನು ಶಾಸಕ ಡಾ.ಮಂತರ್ ಗೌಡ ಪರಿಶೀಲಿಸಿದರು. ಪ್ರಮೋದ್ ಮುತ್ತಪ್ಪ, ಗಿರೀಶ್ ಕುಮಾರ್, ಉಮೇಶ್ ಚಂದ್ರ, ಪ್ರಸನ್ನ ಕುಮಾರ್, ಸಹಾಯಕ ಇಂಜಿನಿಯರ್ ಬಿಪಿನ್ ಚಂದ್ರ ಇದ್ದರು.
- ಅಧಿಕಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಸೂಚನೆ
- ಕುಶಾಲನಗರದಲ್ಲಿ ಪರಿಶೀಲನೆ
ಕುಶಾಲನಗರ: ಪಟ್ಟಣದಲ್ಲಿ ನಿಧಾನಗತಿಯಲ್ಲಿರುವ ಒಳಚರಂಡಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ಶಾಸಕ ಡಾ.ಮಂತರ್‌ಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಜೆಸಿಬಿ ಮೂಲಕ ಜಲಮಂಡಳಿ ಅಧಿಕಾರಿಗಳು ನಿಂತು ಎಸ್‌ಟಿಪಿ ಕಾಮಗಾರಿ ಮಾಡಿಸುತ್ತಿದ್ದ ಸಂದರ್ಭ ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಶಾಸಕರು ಸ್ಥಳಕ್ಕೆ ಆಗಮಿಸಿ ರಾಷ್ಟ್ರೀಯ ಹೆದ್ದಾರಿಗೆ ಯಾವುದೇ ಹಾನಿಯಾಗದಂತೆ ಹಾಗೂ ಈಗಾಗಲೇ ಗುಂಡಿ ತೆರೆದ ಸ್ಥಳಗಳನ್ನು ಪೂರ್ಣವಾಗಿ ಮುಚ್ಚುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅನನುಕೂಲವಾಗದಂತೆ ಎಚ್ಚರಿಕೆ ವಹಿಸಲು ಶಾಸಕರು ಸೂಚಿಸಿದರು.
ಕುಶಾಲನಗರ ಪಟ್ಟಣದ ಸಮಗ್ರ ಒಳಚರಂಡಿ ಪೈಪ್‌ಗಳನ್ನು ಜೋಡಣೆ ಮಾಡುವ ಮೂಲಕ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದರು.
ಈಗಾಗಲೇ ಒಳಚರಂಡಿಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಒಂದೆರಡು ಕಡೆಗಳಲ್ಲಿ ಬಾಕಿ ಇರುವ ಪೈಪ್‌ಗಳ ಜೋಡಣೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇನ್ನೂ ಕೆಲವೇ ದಿನಗಳಲ್ಲಿ ನಗರದ ನಿವಾಸಿಗಳ ಬಳಕೆಗೆ ಮುಕ್ತಗೊಳಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಒಳಚರಂಡಿ ಹಾಗೂ ಜಲ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಚಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಸನ್ನ ಕುಮಾರ್, ಸಹಾಯಕ ಇಂಜಿನಿಯರ್ ಬಿಪಿನ್ ಚಂದ್ರ ಇದ್ದರು.