- ಎಸ್ಸೆಸ್ಸೆಲ್ಸಿ ಓದಿದ ಬಳಿಕ
- ಸಹೋದರರು ಉದ್ಯೋಗದತ್ತ ಮುಖ ಮಾಡದೆ
- ತಂದೆಯಿಂದ ಬಳುವಳಿಯಾಗಿ ಬಂದ
ಶನಿವಾರಸಂತೆ: ಎಸ್ಸೆಸ್ಸೆಲ್ಸಿ ಓದಿದ ಬಳಿಕ ಸಹೋದರರು ಉದ್ಯೋಗದತ್ತ ಮುಖ ಮಾಡದೆ ತಂದೆಯಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಮೀಪದ ಮಾಲಂಬಿ ಗ್ರಾಮದ ನಿವಾಸಿ ದಿ.ಜಯಪ್ಪ ಅವರ ಪುತ್ರರಾದ ಪ್ರಸನ್ನಕುಮಾರ್ ಹಾಗೂ ಯೋಗೇಶ್ ಇದೀಗ ವರ್ಷಕ್ಕೆ 5 ರಿಂದ 8 ಲಕ್ಷ ರೂ. ಆದಾಯ ಕಂಡುಕೊಳ್ಳುವ ಮೂಲಕ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತೋಟದಲ್ಲಿ ಕಾಫಿ, ಅಡಕೆ, ಕಾಳುಮೆಣಸು, ಕಿತ್ತಳೆ, ಜೋಳ, ಭತ್ತ, ತೆಂಗು, ಬಟರ್‌ಫ್ರೂಟ್, ಸಪೋಟ, ಸಿಹಿ ಗೆಣಸು ಸೇರಿದಂತೆ ಇತರ ಬೆಳೆ ಬೆಳೆಯುತಿದ್ದಾರೆ. ಇದರೊಂದಿಗೆ ಕಾಫಿ ತಳಿಗಳಾದ ಅರೇಬಿಕಾ, ರೊಬಸ್ಟಾ ಬೆಳೆದಿದ್ದಾರೆ. ರೊಬಸ್ಟಾ ಎಕರೆಗೆ 48ರಿಂದ 60 ಚೀಲ ಬೆಳೆದರೆ, ಅರೇಬಿಕಾ ಕಾಫಿ ಹಾಗೂ ಪಾರ್ಚಮೆಂಟ್ ಎಕರೆಗೆ ಸುಮಾರು 20 ರಿಂದ 25 ಚೀಲ ಕೊಯ್ಯುತ್ತಾರೆ. ಇನ್ನು ಕಾಫಿ ತೋಟದಲ್ಲಿ ಕಾಡುಜಾತಿಯ ಮರ, ಸಿಲ್ವರ್ ಹಾಗೂ ಅಡಕೆ ಮರಗಳಿಗೆ ಕಾಳುಮೆಣಸು ಬಳ್ಳಿ ಹಬ್ಬಿಸಿದ್ದಾರೆ. ಪಣಿಯೂರು 1 ಪಣಿಯೂರು 2, ಕರಿಮುಂಡ, ಐಐಎಸ್‌ಆರ್ ಹಾಗೂ ತೇಮಮ್ಮ ಎಂಬ ಹೆಸರಿನ ಕಾಳುಮೆಣಸು ತಳಿ ಬೆಳೆದಿದ್ದಾರೆ.
ಕಾಲಕಾಲಕ್ಕೆ ಸರಿಯಾಗಿ ಸ್ಪ್ರೇ, ಪೋಷಕಾಂಶ ಮಿಶ್ರಣ, ಸಿಂಪಡಣೆ, ಸುಣ್ಣ, ಮರಗಸಿ, ನೀರಿನ ವ್ಯವಸ್ಥೆ ಮಾಡುವ ಮೂಲಕ ಹೆಚ್ಚು ಆದಾಯ ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಸಿಲ್ವರ್, ಅಡಕೆ ಮರಗಳು, ಕಾಳುಮೆಣಸು ಗಿಡ 30ರಿಂದ 40 ಅಡಿ ಎತ್ತರವಿದೆ. ಒಂದು ಎಕರೆಗೆ 320 ರಿಂದ 430 ಕೆಜಿ ಇಳುವರಿ ಪಡೆಯುತ್ತಿದ್ದು, ಕಾಫಿ ಹಾಗೂ ಇತರ ಬೆಳೆಗಳಿಗೆ ಹೋಲಿಕೆ ಮಾಡಿದರೆ ಕಾಳುಮೆಣಸು ಉತ್ತಮ ಆದಾಯ ಗಳಿಸುವ ಬೆಳೆ ಎನ್ನುತ್ತಾರೆ ಸಹೋದರರು.
ಅಡಕೆ ಮರಗಳಿಂದ ಉತ್ತಮ ಆದಾಯ ಗಳಿಸಬಹುದೆಂದು ಗಿಡಗಳನ್ನು ಗದ್ದೆಯಲ್ಲಿ ಹಾಗೂ ಕಾಫಿ ತೋಟದೊಳಗೆ ನೆಡಲಾಗಿದ್ದು, ಇದೀಗ ಫಸಲು ನೀಡುವ ಹಂತಕ್ಕೆ ತಲುಪಿದೆ. ಕಾಫಿ ತೋಟಗಳಿಗೆ ಪ್ರತ್ಯೇಕ ಕೊಳವೆಬಾವಿ ಕೊರೆಸಿದ್ದು, ಕಾಫಿ, ಕಾಳುಮೆಣಸು, ಅಡಕೆಗೆ ಮೈಕ್ರೋ ಮಾದರಿಯಲ್ಲಿ ನೀರು ಹಾಯಿಸುವ ತಂತ್ರಗಾರಿಕೆ ಕಂಡುಕೊಂಡಿದ್ದಾರೆ. ಅಲ್ಲದೆ ಮನೆ ಬಳಕೆಗೆ ಬೇಕಾಗುವಷ್ಟು ಭತ್ತವನ್ನೂ ಸಹೋದರರೂ ಬೆಳೆಯುತಿದ್ದಾರೆ. ಅಂತೆಯೇ ಹೈನುಗಾರಿಕೆಗೂ ಒತ್ತು ನೀಡುವ ಮೂಲಕ ಹಾಲು, ಮೊಸರು, ಬೆಣ್ಣೆಯನ್ನು ಮನೆಯಲ್ಲೇ ತಯಾರಿಸುತ್ತಿದ್ದಾರೆ.
ಪ್ರತಿ ವರ್ಷ ಕಾಳುಮೆಣಸು ಹಾಗೂ ಕಾಫಿ ನರ್ಸರಿ ಮಾಡುತ್ತಿದ್ದು, ಕಾಡುಮಣ್ಣು, ದನದ ಗೊಬ್ಬರವನ್ನು ಮಿಶ್ರಣ ಮಾಡುವ ಮೂಲಕ ಸುಲಭ ವಿಧಾನದಲ್ಲಿ ನರ್ಸರಿ ಮಾಡಿ ಶೇ.75ರಷ್ಟು ಬಳ್ಳಿಗಳನ್ನು ಉಳಿಸಿಕೊಳ್ಳುತ್ತಿದ್ದಾರೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನರ್ಸರಿ ಮಾಡಿ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್‌ನಲ್ಲಿ ಮರದ ಬುಡಕ್ಕೆ 3- 4 ಬಳ್ಳಿಗಳನ್ನು ನೆಡುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಬರುವಂತೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ. ಪತಿಯರ ಕೃಷಿ ಕಾಯಕಕ್ಕೆ ಪತ್ನಿಯರು ಹಾಗೂ ತಾಯಿ ಸಾಥ್ ನೀಡುತ್ತಿದ್ದಾರೆ.
ನಿತ್ಯ ಬೆಳಗ್ಗಿನಿಂದ ಸಂಜೆವರೆಗೆ ತೋಟ ಹಾಗೂ ಗದ್ದೆಯಲ್ಲಿ ಕೆಲಸ ನಿರ್ವಹಿಸುವ ಸಹೋದರರು ಇನ್ನಷ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಆಲೂರು-ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸನ್ನಕುಮಾರ್ ಸೇವೆ ಸಲ್ಲಿಸುತಿದ್ದಾರೆ. ಗದ್ದೆಯನ್ನು ವಿಂಗಡಣೆ ಮಾಡಿ ಒಂದೆಡೆ ಭತ್ತ, ಸಿಹಿಗೆಣಸು ಸುವರ್ಣಗೆಡ್ಡೆ ಸುಂಟಿ ಬೆಳೆದರೆ, ಇನ್ನೊಂದೆಡೆ ಅಡಕೆ ರೊಬಸ್ಟಾ ಕಾಫಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆದಿದ್ದಾರೆ.
ಕೃಷಿಯನ್ನು ಇಷ್ಟಪಟ್ಟು ಮಾಡುವುದರ ಜತೆಗೆ ಶ್ರದ್ಧೆಯಿಂದ ಮಾಡಿದರೆ ನಷ್ಟವಾಗುವುದಿಲ್ಲ. ಡಿಗ್ರಿ, ಪಿಯುಸಿ ಓದಿದ ತಕ್ಷಣ ಬೆಂಗಳೂರು, ಮೈಸೂರು ಮುಂತಾದ ಕಡೆಗೆ ಉದ್ಯೋಗಕ್ಕೆಂದು ತೆರಳುತ್ತಾರೆ. ಈ ಪ್ರವೃತ್ತಿಯನ್ನು ಬಿಟ್ಟು ಹೊಲ-ಗದ್ದೆ, ತೋಟಗಳಿದ್ದರೆ ಅದನ್ನೇ ಅಭಿವೃದ್ಧಿಪಡಿಸಲು ಮುಂದಾಗಬೇಕು. ಕೃಷಿ ಎಂದಾಕ್ಷಣ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಕೆಲಸವನ್ನು ಯಾವುದೋ ಸಮಯಕ್ಕೆ ಮಾಡುವ ಬದಲು ಸಮಯಕ್ಕೆ ಸರಿಯಾಗಿ ಮಾಡಬೇಕು. ನೀರಾವರಿ ಗದ್ದೆಯಲ್ಲಿ ಒಂದೇ ಬೆಳೆ ಬೆಳೆಯದೆ ಬೇರೆ ಬೇರೆ ಬೆಳೆಗಳನ್ನು ಬೆಳೆಯಬೇಕು. ಆಗ ಮಾತ್ರ ಕೃಷಿಯಲ್ಲಿ ನಷ್ಟವಿಲ್ಲ ಎಂಬುದು ಪ್ರಸನ್ನಕುಮಾರ್ ಹಾಗೂ ಯೋಗೇಶ್ ಅಭಿಪ್ರಾಯ.
ಕಾರ್ಮಿಕರ ವೇತನ, ರಸಗೊಬ್ಬರ ಬೆಲೆ ಗಗನಕ್ಕೇರುತ್ತಿರುವುದು, ಹವಾಮಾನದ ವೈಪರೀತ್ಯದಿಂದ ಕೃಷಿ ದುಸ್ತರವಾಗುತ್ತಿದೆ. ಆದರೂ ಧೃತಿಗೆಡದೆ, ವಿಲಾಸಿ ಜೀವನ ಮಾಡದೆ ಸರಳ ಜೀವನ ನಡೆಸಿದರೆ ಕೃಷಿ ಎಲ್ಲ ವೃತ್ತಿಗಿಂತ ಒಳ್ಳೆಯದು. ಬೆಳೆಗಾರರೂ ಕಾರ್ಮಿಕರ ಜತೆಯಲ್ಲಿ ನಿಂತು ಕೆಲಸ ನಿರ್ವಹಿಸಬೇಕು. ಕಾಫಿ ತೊಟದ ಕೆಲಸಗಳಿಗೆ ನುರಿತ ಕೆಲಸಗಾರರ ಅವಶ್ಯಕತೆ ಇದೆ. ಜತೆಗೆ ಬೇರೆ ಬೇರೆ ರೈತರಿಂದ ಮಾಹಿತಿ ಪಡೆಯಬೇಕು. ನಾನು ಹಾಗೂ ಸಹೋದರ ತೋಟವನ್ನು ಅಭಿವೃದ್ಧಿಪಡಿಸಲು ಪಣ ತೊಟ್ಟು ಕೆಲಸ ಮಾಡಿದೆವು. ಇದರಿಂದ ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯ ಬದುಕು ನಮ್ಮದಾಗಿದೆ.
ಎಸ್.ಜೆ.ಪ್ರಸನ್ನಕುಮಾರ್ ರೈತ, ಮಾಲಂಬಿ ಗ್ರಾಮ
ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸ ಮಾಡಬೇಕು. ಕಾಫಿ ತೋಟ ಹಾಗೂ ಗದ್ದೆಯಲ್ಲಿ ನೀರಿನ ವ್ಯವಸ್ಥೆ ಇರಬೇಕು. ಇದರಿಂದ ಉತ್ತಮ ಆದಾಯ ಗಳಿಸಬಹುದು. ಮೈಕ್ರೋ ಮಾದರಿಯಲ್ಲಿ ತೋಟಕ್ಕೆ ನೀರಾಯಿಸಲು ವ್ಯವಸ್ಥೆ ಮಾಡಲಾಗಿದೆ. ಮೋಟಾರ್ ಆನ್ ಮಾಡಿದರೆ ಎಲ್ಲ ಭಾಗಕ್ಕೂ ಒಂದೇ ಮಾದರಿಯಲ್ಲಿ ನೀರು ಸರಬರಾಜಾಗುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವಂತೆ ಕೆಲಸ ನಿರ್ವಹಿಸಬೇಕು.
ಎಸ್.ಜೆ.ಯೋಗೇಶ್ ರೈತ, ಮಾಲಂಬಿ
ಕೃಷಿ ಚಟುವಟಿಕೆ ಎಂದರೆ ನನಗೆ ಹೆಚ್ಚು ಆಸಕ್ತಿ. ನಾನು ಸಹ ನಮ್ಮ ತೋಟದಲ್ಲಿ ಎಲ್ಲ ರೀತಿಯ ಕೆಲಸ ಮಾಡಿದ್ದು, ಇದೀಗ ನನ್ನ ಮಕ್ಕಳು ಕೆಲಸದ ಜವಾಬ್ದಾರಿ ಹೊತ್ತಿದ್ದಾರೆ. ಕೆಲವೊಂದು ಸಲಹೆಗಳನ್ನು ನನ್ನಿಂದ ಪಡೆಯುತ್ತಿದ್ದಾರೆ. ಸಿಕ್ಕ ಭೂಮಿಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಈ ಹಿಂದೆ ಹೆಚ್ಚು ಹೈನುಗಾರಿಕೆ ಮಾಡಲಾಗುತ್ತಿತ್ತು. ಇದೀಗ ಕಡಿಮೆ ಆಗಿದೆ. ಕೃಷಿ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಲಲಿತಾ ಜೋಯಪ್ಪ ಮಾಲಂಬಿ ನಿವಾಸಿ