ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಧರ್ಮಜ ಉತ್ತಪ್ಪ, ಎ.ಎಸ್. ಪೊನ್ನಣ್ಣ ಇದ್ದರು. 
ಕೊಡಗು

ನರೇಗಾ ಸ್ವರೂಪ ಬದಲಾವಣೆ ಬಡವರ ವಿರೋಧಿ ನೀತಿ ಎಂದ ಬೋಸರಾಜು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮನರೇಗಾ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಿರುವ ಕೇಂದ್ರ ಸರ್ಕಾರದ ಕ್ರಮ ಬಡವರ ವಿರೋಧಿಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ತೀವ್ರ ವಾಗ್ದಾಳಿ ನಡೆಸಿದರು.
ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರಾಜ್ಯ ಸರ್ಕಾರಗಳಾಗಲಿ ಅಥವಾ ಸಂಬAಧಪಟ್ಟ ಸಂಘ ಸಂಸ್ಥೆಗಳ ಜೊತೆ ಚರ್ಚಿಸದೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇಂದ್ರ ಸರ್ಕಾರ ಏಕಾಏಕಿ ಮಸೂದೆಯನ್ನು ಎರಡೂ ಸದನಗಳಲ್ಲಿ ಪಾಸ್ ಮಾಡಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯ್ತಿಗಳ ಹಕ್ಕು ಕಸಿದ ಕೇಂದ್ರ:
"ಯುಪಿಎ ಸರ್ಕಾರದ ಅವಧಿಯಲ್ಲಿ ಬಡವರಿಗಾಗಿ ಜಾರಿಗೆ ತಂದಿದ್ದ ಈ ಯೋಜನೆಯ ಮೂಲ ಉದ್ದೇಶವನ್ನೇ ಕೇಂದ್ರ ಸರ್ಕಾರ ಈಗ ತಿರುಚಿದೆ. ಹೊಸ ಬದಲಾವಣೆಯ ಮೂಲಕ ಗ್ರಾಮ ಪಂಚಾಯ್ತಿಗಳ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅದಾನಿ, ಅಂಬಾನಿಯAತಹ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ," ಎಂದು ಸಚಿವರು ಗಂಭೀರ ಆರೋಪ ಮಾಡಿದರು.
ಯೋಜನೆಯ ಹೆಸರಿನಲ್ಲಿದ್ದ 'ಮಹಾತ್ಮ ಗಾಂಧಿ' ಅವರ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ಮತ್ತು ಆರ್‌ಎಸ್‌ಎಸ್ ತನ್ನ ಮನಸ್ಥಿತಿಯನ್ನು ತೋರಿಸಿದೆ. ಈ ತಿದ್ದುಪಡಿಯಿಂದ ರಾಜ್ಯ ಸರ್ಕಾರಗಳ ಮೇಲೆ ಆರ್ಥಿಕ ಹೊರೆ ಬೀಳಲಿದ್ದು, ಯೋಜನೆಯೇ ಹಳ್ಳ ಹಿಡಿಯುವಂತೆ ಮಾಡುವುದು ಕೇಂದ್ರದ ಗುಪ್ತ ಅಜೆಂಡಾ ಆಗಿದೆ ಎಂದು ಅವರು ದೂರಿದರು.
ಚಂದ್ರಬಾಬು ನಾಯ್ಡು ಬೆಂಬಲದ ಎಚ್ಚರಿಕೆ:
ಇತರ ರಾಜ್ಯಗಳು ಕೂಡ ಈ ಬದಲಾವಣೆಯನ್ನು ವಿರೋಧಿಸುತ್ತಿವೆ ಎಂದು ಹೇಳಿದ ಭೋಸರಾಜು, "ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶೇ. 100 ರಷ್ಟು ಅನುದಾನವನ್ನು ಕೇಂದ್ರವೇ ಭರಿಸಬೇಕೆಂದು ಪತ್ರ ಬರೆದಿದ್ದಾರೆ. ಒಂದು ವೇಳೆ ಅವರು ಬೆಂಬಲ ವಾಪಸ್ ಪಡೆದರೆ ಕೇಂದ್ರ ಸರ್ಕಾರವೇ ಉರುಳುತ್ತದೆ. ಇವತ್ತಲ್ಲ ನಾಳೆ ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ವಾಪಸ್ ಪಡೆಯಲೇಬೇಕು," ಎಂದು ಭವಿಷ್ಯ ನುಡಿದರು.
ಭ್ರಷ್ಟಾಚಾರದ ಬಗ್ಗೆ ಸಮರ್ಥನೆ:
ನರೇಗಾದಲ್ಲಿ ನಕಲಿ ಜಾಬ್ ಕಾರ್ಡ್ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಭ್ರಷ್ಟಾಚಾರ ನಡೆದಿದೆ ಮತ್ತು ನಡೆಯುತ್ತಿದೆ. ಕೇವಲ ಯೋಜನೆಯ ಸ್ವರೂಪ ಬದಲಿಸಿದರೆ ಭ್ರಷ್ಟಾಚಾರ ಸರಿಯಾಗುವುದಿಲ್ಲ. ಭ್ರಷ್ಟಾಚಾರವೇ ನಡೆಯದ ಒಂದೇ ಒಂದು ಯೋಜನೆಯನ್ನು ತೋರಿಸಲಿ ನೋಡೋಣ," ಎಂದು ಸವಾಲು ಹಾಕಿದರು.
ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗರಂ:
ಅಬಕಾರಿ ಇಲಾಖೆಯ ಲಂಚದ ಹಣವನ್ನು ಅಸ್ಸಾಂ ಚುನಾವಣೆಗೆ ಬಳಸಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಅಶೋಕ್ ಮತ್ತು ವಿಜಯೇಂದ್ರ ಅವರಿಗೆ ಪಕ್ವತೆ (ಒಚಿಣuಡಿiಣಥಿ) ಇದೆಯೇ? ಅವರಿಗೆ ನಾಚಿಕೆಯಾಗಬೇಕು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ," ಎಂದು ಕಿಡಿಕಾರಿದರು.
ಸಂವಿಧಾನ ವಿರೋಧಿ ನಡೆ:
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ, "ಕೇಂದ್ರದ ಈ ನಡೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಉದ್ಯೋಗ ಖಾತ್ರಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡುತ್ತಿದೆ. ಅನುದಾನ ಹಂಚಿಕೆಯಲ್ಲಿ 60:40 ಅನುಪಾತ ಮಾಡಿರುವುದು ರಾಜ್ಯಕ್ಕೆ ದೊಡ್ಡ ಹೊರೆಯಾಗಲಿದೆ," ಎಂದು ಕಳವಳ ವ್ಯಕ್ತಪಡಿಸಿದರು.