ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ ಕೊಡವ ವೀರ ಜನಾಂಗದ ಅಂತರಾತ್ಮ ಭಾಗ ೧ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಎ.ಎಸ್.ಪೊನ್ನಣ್ಣ, ಸುಜಾ ಕುಶಾಲಪ್ಪ, ರಾಜೀವ್ ಬೋಪಯ್ಯ ಇತರರಿದ್ದರು. 
ಕೊಡಗು

ಕೊಡವ ಜನಾಂಗ ಸಂಪ್ರದಾಯ, ಪರಂಪರೆ ಮರೆಯದಿರಿ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಕೊಡವ ಜನಾಂಗ ಸಂಪ್ರದಾಯ, ಪರಂಪರೆ ಮರೆಯದಿರಿ
  • ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಕಿವಿಮಾತು
ಪೊನ್ನಂಪೇಟೆ: ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಿರಿಯ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿರುವ ಕೊಡವ ವೀರ ಜನಾಂಗದ ಅಂತರಾತ್ಮ ಭಾಗ ೧ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಉಳುವಂಗಡ ಲೋಹಿತ್ ಭೀಮಯ್ಯ ಜಬ್ಬೂಮಿ ಹಾಡಿನ ಮೂಲಕ ಪ್ರಾರ್ಥಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ವೇದಿಕೆಯಲ್ಲಿದ್ದ ಗಣ್ಯರು ಕೊಡವರ ಹೆಗ್ಗುರುತಾದ ಗೆಜ್ಜೆತಂಡ್‌ಗೆ ಸಾಂಪ್ರದಾಯಿಕವಾಗಿ ಅಕ್ಕಿ ಹಾಕುವ ಮೂಲಕ ದೇವರನ್ನು ಸ್ತುತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುಸ್ತಕ ಲೋಕಾರ್ಪಣೆ ಮಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಕೊಡವ ಜನಾಂಗದವರು ತಮ್ಮ ನೈಜ ಆಚರಣೆ, ಸಂಪ್ರದಾಯ ಹಾಗೂ ಪರಂಪರೆಯನ್ನು ಮರೆಯಬಾರದು. ಅಧ್ಯಯನ ಪುಸ್ತಕ ರಚಿಸಿ ಹೊರತರುವುದು ಕಷ್ಟದ ಕೆಲಸ. ಕೃತಿಯನ್ನು ಓದದೆ ಅದರ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಕೊಡವರ ಗುರು-ಕಾರೋಣ ನಂಬಿಕೆ ಹಾಗೂ ಪೂರ್ವಿಕರಿಂದ ಬಂದಿರುವ ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ರಮೇಶ್ ಉತ್ತಪ್ಪ ಅವರ ಕೃತಿ ಯಶಸ್ವಿಯಾಗಲಿ ಎಂದು ಹಾರೈಸಿದ ಪೊನ್ನಣ್ಣ, ಪುಸ್ತಕವನ್ನು ಪ್ರಕಟಿಸಿದ ಜಬ್ಬೂಮಿ ಸಂಘಟನೆಯ ಕಾರ್ಯವನ್ನು ಶ್ಲಾಘಿಸಿದರು.
ಟ್ರಸ್ಟ್ ಅಧ್ಯಕ್ಷ ಚೊಟ್ಟೇಕ್ ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಕೊಡವರ ಇತಿಹಾಸ, ಪದ್ಧತಿ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಖಲಿಸುವ ಅಗತ್ಯವಿದೆ. ಕೊಡವರ ಬದಲಾಗುತ್ತಿರುವ ಆಚರಣೆಗಳಿಗೆ ಸೂಕ್ತ ದಾಖಲೆಗಳಿಲ್ಲದಿರುವುದೇ ಕಾರಣವಾಗಿದ್ದು, ಈ ಪುಸ್ತಕ ಪ್ರತಿಯೊಬ್ಬ ಕೊಡವರ ಮನೆಯಲ್ಲೂ ಇರಬೇಕೆಂದರು.
ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಯಾವುದೇ ಜನಾಂಗದವರು ಅರ್ಹತೆ ಇದ್ದರೆ ಅವರಿಗೆ ಬೇಕಾದ ಹಕ್ಕನ್ನು ಪಡೆದುಕೊಳ್ಳಲಿ, ಅದನ್ನು ವಿರೋಧಿಸುವ ಕೆಲಸವನ್ನು ಯಾರು ಮಾಡಬಾರದು. ನಮ್ಮ ಆಚಾರ ವಿಚಾರ ಪರಂಪರೆ ಪದ್ಧತಿಯನ್ನು ಅನಾದಿಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ, ಯಾಕೆ ಅದನ್ನು ಆಚರಿಸುತ್ತಿದ್ದೇವೆ ಎಂದು ಯಾರಿಗೂ ಗೊತ್ತಿಲ್ಲ. ಅದನ್ನು ಜನಾಂಗದವರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಈ ಪುಸ್ತಕವನ್ನು ರಚಿಸಲಾಗಿದೆ ಎಂದು ಹೇಳಿದರು.
ಕೊಡವರ ಆಚಾರಪರಂಪರೆಯ ಹಿನ್ನೆಲೆ ಹಾಗೂ ಸ್ವಂತಿಕೆಯನ್ನು ದಾಖಲಿಸುವ ಉದ್ದೇಶದಿಂದ ೩೫ ವರ್ಷಗಳ ಅಧ್ಯಯನದ ಬಳಿಕ ಕೃತಿ ರಚಿಸಲಾಗಿದೆ. ಕೊಡವರ ಪದ್ಧತಿಯೇ ಅವರ ಸಂಪ್ರದಾಯಿಕ ಸಂವಿಧಾನವಾಗಿದ್ದು, ಇತಿಹಾಸವನ್ನು ಅಧಿಕೃತವಾಗಿ ದಾಖಲಿಸುವ ಮೂಲಕ ಸಮುದಾಯದ ಹಕ್ಕುಗಳು ಹಾಗೂ ಸ್ಥಾನಮಾನಕ್ಕೆ ಪೂರಕ ದಾಖಲೆ ಸಿದ್ಧಪಡಿಸಬೇಕಿದೆ ಎಂದ ಅವರು, ಮಹಿಳೆಯರೆ ಕೊಡವ ಜನಾಂಗದ ಬೆನ್ನೆಲುಬು, ಅವರಿಂದಲೇ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ರಮೇಶ್ ಉತ್ತಪ್ಪ ಅವರ ಕೃತಿಯ ಮೂಲಕ ಕೊಡವರ ಪದ್ಧತಿ, ಪರಂಪರೆ, ಸಂಸ್ಕೃತಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಯಬಹುದು. ಸಮಾಜಮುಖಿ ಕಾರ್ಯಗಳಿಗೆ ಪುಸ್ತಕ ಮಾರಾಟದ ಹಣ ಬಳಸುತ್ತಿರುವ ಜಬ್ಬೂಮಿ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ. ಕೊಡವರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ ಅವರು ರಮೇಶ್ ಉತ್ತಪ್ಪ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಟ್ಟಿಯಂಡ ಲಿಖಿತ, ಚೇಂದಿರ ನಿರ್ಮಲಾ ಬೋಪಣ್ಣ ಹಾಗೂ ಮಾಲೇಟಿರ ಅಜಿತ್ ಪೂವಣ್ಣ ಕೊಡವ ಭಾವಗೀತೆಗಳನ್ನು ಹಾಡಿದರು. ಮಾಲೇಟಿರ ಶ್ರೀನಿವಾಸ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳೀಮಾಡ ಮೋಟಯ್ಯ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ಕೊಡವತಕ್ಕ್ ಎಳ್ತ್ ಕಾರಡ ಕೂಡದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಕೊಡವ ಸಂಘಟನೆಗಳ ಮುಖಂಡರು, ಅಪಾರ ಸಂಖ್ಯೆಯ ಕೊಡವ ಜನಾಂಗ ಭಾಂಧವರು ಪಾಲ್ಗೊಂಡಿದ್ದರು.