ಆಲೂರು ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಯಶ್ರೀ, ಅಪ್ಪಚ್ಚು ರಂಜನ್, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮನೆಹಳ್ಳಿ ಶ್ರೀ ಮಹಾಂತಶಿವಲಿಂಗ ಸ್ವಾಮೀಜಿ, ಚಂದ್ರಶೇಖರ್, ಲೋಕೇಶ್ ಸಾಗರ್, ಜವರಪ್ಪ ಇತರರು ಇದ್ದರು.
* ಲೇಖಕಿ ಗೀತಾಂಜಲಿ ಅವರ ಕೃತಿ ಬಿಡುಗಡೆ
ಶನಿವಾರಸಂತೆ : ವಿವಿಧ ರಂಗಗಳಂತೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ ಎಂದು ಕೋಲಾರ ಜಿಲ್ಲಾ ನ್ಯಾಯಾಧೀಶರಾದ ಜಯಶ್ರೀ ಹೇಳಿದರು.
ಆಲೂರು ಸಿದ್ದಾಪುರ ಸಮೀಪದ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸೋಮವಾರಪೇಟೆ ಲೇಖಕಿ ಎನ್.ಎಂ.ಗೀತಾಂಜಲಿ ಅವರ ಮಾನಿನಿಯ ಮಾರ್ದನಿ , ಜ್ಞಾನ ಮಂಥನ ಹಾಗೂ ನಿನಾದ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. 2 ದಶಕದ ಹಿಂದೆ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತ ಎಂದು ಹಲವರು ಗೇಲಿ ಮಾಡುತ್ತಿದ್ದರು. ಆದರೆ ಇಂದು ಎಲ್ಲ ರಂಗಗಳಲ್ಲೂ ಮಹತ್ತರವಾದ ಸಾಧಮೆ ತೋರಿದ್ದಾರೆ ಎಂಬುದೇ ಹೆಮ್ಮೆ ಎಂದರು. ಗೀತಾಂಜಲಿ ಅವರು ತಮ್ಮ ಕವನ ಸಂಕಲನದಲ್ಲಿ ಸಾಮಾಜಿಕ ಚಿಂತನೆ,ಧಾರ್ಮಿಕ ಆಚರಣೆ ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು. ಸಾರ್ವಜನಿಕರು ಪುಸ್ತಕಗಳನ್ನು ಕೊಂಡು ಓದಿದಾಗ ಬರೆದಿದ್ದು ಸಾರ್ಥಕವಾಗುತ್ತದೆ ಎಂದರು.
ಹಿಡಿತವಿದ್ದರೆ ಸಾಧನೆ ಸಾಧ್ಯ:
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಬರವಣಿಗೆ ಎನ್ನುವುದು ಸುಲಭದ ಕೆಲಸವಲ್ಲ. ಭಾಷೆ, ಪದ ಬಳಕೆಯ ಮೇಲೆ ಹಿಡಿತವಿದ್ದರೆ ಮಾತ್ರ ಸಾಹಿತ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಗೀತಾಂಜಲಿ ಅವರ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ಸಾಹಿತಿ ಬೆಸೂರು ಮೋಹನ ಪಾಳೆಗಾರ ಮಾತನಾಡಿ, ಗೀತಾಂಜಲಿ ಅವರು ತಾನು ಕಂಡ ಸಮಾಜ, ಅನುಭವಿಸಿದ ನೋವು ನಲಿವು, ಮಹಿಳೆಯರ ಮನದ ಕೂಗು, ಸಂಬಂಧಗಳ ಸೂಕ್ಷತೆ, ಪ್ರೀತಿಯ ಮೃದುತ್ವ ಮತ್ತು ಸ್ನೇಹದ ಬಗ್ಗೆ ಸೊಗಸಾದ ಕವಿತೆಗಳನ್ನು ರಚಿಸಿದ್ದಾರೆಂದರು. ಇವರ ಒಂದೊಂದು ಕವನಗಳೂ ಓದುಗರ ಹೃದಯ ತಟ್ಟುತ್ತದೆ. ಮನಸ್ಸಿಗೆ ಮುದ ನೀಡುತ್ತದೆ. ಕವನಗಳು ಧ್ವನಿಪೂರ್ಣವಾಗಿವೆ. ಮಲೆನಾಡಿನ ಮಣ್ಣಿನ ಮಗಳಾದ ಇವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದರು. ಇದೇ ಸಂದರ್ಭದಲ್ಲಿ ಗೀತಾಂಜಲಿ ಮಹೇಶ್ ದಂಪತಿಗೆ ಸನ್ಮಾನಿಸಲಾಯಿತು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಶ್ರೀ ಸದಾಶಿವ ಸ್ವಾಮೀಜಿ, ಕೆಸತೂರು ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಜಿಪಂ ಉಪಕಾರ್ಯದರ್ಶಿ ಚಂದ್ರಶೇಖರ್, ಪತ್ರಕರ್ತ ಅನಂತ ಶಯನ ಇತರರು ಇದ್ದರು.