ಇಂಜಿಲಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಬಿರದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. 
ಕೊಡಗು

ಇಂಜಿಲಗೆರೆಯಲ್ಲಿ ರಕ್ತದಾನ ಶಿಬಿರ ಯಶಸ್ವಿ

ಸಿದ್ದಾಪುರ: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಜಿಲಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ರಕ್ತದಾನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾ ಬೋಧಕ ಆಸ್ಪತ್ರೆ, ಅಮ್ಮತ್ತಿ ಗ್ರಾಮ ಪಂಚಾಯಿತಿ, ಹುಲಿಯೇರಿ ಮತ್ತು ಇಂಜಿಲಗೆರೆ ಗ್ರಾಮಸ್ಥರ ಜಂಟಿ ಸಹಯೋಗದಲ್ಲಿ ಇತ್ತೀಚೆಗೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಸುಮಾರು 50ರಿಂದ 60 ಜನರಿಗೆ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ಉಚಿತವಾಗಿ ನಡೆಸಲಾಯಿತು. ಸಿದ್ದಾಪುರದ ಲ್ಯಾಬ್ ಟೆಕ್ನಿಷಿಯನ್‌ಗಳಾದ ಶ್ರೀನಿವಾಸ್, ಶೋಭಾ, ಭವ್ಯಾ ಹಾಗೂ ಆಶಾ ಕಾರ್ಯಕರ್ತೆಯರು ತಪಾಸಣಾ ಕಾರ್ಯದಲ್ಲಿ ಸಹಕರಿಸಿದರು. ಇದೇ ವೇಳೆ 33 ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯ ಸೇವೆ ಸಲ್ಲಿಸಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಂಬಯ್ಯ, ಪ್ರಶಾಂತ್ ರಾಯರ್, ಶಾಂತಾ, ಎಂ.ಎಚ್.ನಿತೀಶ್, ಗ್ರಾಮದ ಮುಖಂಡ ಸುಬೇರ್ ಇತರರು ಇದ್ದರು.