ನಂಜರಾಯಪಟ್ಟಣದ ಮಹಿಳಾ ಸಮಾಜದಲ್ಲಿ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿದರು. ಗೌತಮ್, ಆರ್.ಕೆ. ಚಂದ್ರು, ಮಾವಾಜಿ ರವಿ, ನವೀನ್ ಇದ್ದರು. 
ಕೊಡಗು

ಬಿಜೆಪಿ ಶಕ್ತಿ ಕೇಂದ್ರ ಸಭೆ

ಸುನಿಲ್ ಪೊನ್ನೇಟಿ
ಕುಶಾಲನಗರ:
ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಮಾಡುತ್ತಿದ್ದು ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ದೊರಕುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ನಂಜರಾಯಪಟ್ಟಣದ ಮಹಿಳಾ ಸಮಾಜದಲ್ಲಿ ಭಾನುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶಾಸಕರಿಗೆ ವಾರ್ಷಿಕವಾಗಿ 250 ರಿಂದ 300 ಕೋಟಿ ರೂ.ಗಳನ್ನು ಕ್ಷೇತ್ರದ ಅಭಿವೃದ್ದಿಗೆ ಅನುದಾನ ನೀಡಲಾಗುತ್ತಿತ್ತು.
ಆದರೆ, ಪುಕ್ಕಟೆ ಯೋಜನೆಗಳ ಆಸೆ ತೋರಿಸಿ ರಾಜ್ಯದ ಜನರಿಗೆ ಟೋಪಿ ಹಾಕಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಪ್ರತಿ ಜನರ ಮೇಲೆ ಲಕ್ಷಾಂತರ ರೂ.ಗಳ ಸಾಲದ ಹೊರೆ ಹೊರಿಸಿದೆ.
ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳಾಗುತ್ತಿಲ್ಲ ಎಂದು ಸ್ವತಃ ಕಾಂಗೈ ಶಾಸಕರುಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಕುರ್ಚಿ ಕಾಳಗದಿಂದ ಹಳಿ ತಪ್ಪಿರುವ ಸರ್ಕಾರದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಭ್ರಷ್ಟಾಚಾರ ವ್ಯಾಪಕವಾಗಿದ್ದು ಅಧಿಕಾರಿಗಳು ನೇಣಿಗೆ ಶರಣಾಗುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ವರ್ಗಗಳ ಜನರ ಕಲ್ಯಾಣಕ್ಕೆ ಮೀಸಲಾಗಿದ್ದ ಹಣವನ್ನು ಗ್ಯಾರಂಟಿ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ.
ಮಡಿಕೇರಿ ಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾತಿಯಾದ ಕಾಮಗಾರಿಗಳು ನಡೆಯುತ್ತಿವೆಯೇ ಹೊರತು ಹೊಸದಾದ ಯಾವುದೇ ಅಭಿವೃದ್ಧಿ ಯೋಜನೆಗಳು ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಜಾರಿಯಾಗಿಲ್ಲ. ಬಿಜೆಪಿ ಕಾರ್ಯಕರ್ತರು ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಬೇಕು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಯೋಜನೆಗಳ ಕುರಿತು ಮತದಾರರ ಮನೆ ಬಾಗಿಲಿಗೆ ತೆರಳಿ ಸಂಪೂರ್ಣ ಮಾಹಿತಿ ನೀಡುವ ಮೂಲಕ ಯೋಜನೆಗಳ ಪರಿಣಾಮಕಾರಿ ಬಳಕೆಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಗೌತಮ್ ಮಾತನಾಡಿ, ಅಭಿವೃದ್ದಿ ವಂಚಿತ ಕಾಂಗ್ರೆಸ್ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡದ ಕಾಂಗ್ರೆಸ್ ಸರ್ಕಾರ, ಕರ್ನಾಟಕ ಲೋಕ ಸೇವಾ ಆಯೋಗವನ್ನು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿಸಿ ವ್ಯಾಪಕ ಭ್ರಷ್ಟಾಚಾರ ದೊಂದಿಗೆ ಲಕ್ಷಾಂತರ ಪದವೀಧರರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದರು.
ನಂಜರಾಯಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷರನ್ನಾಗಿ ತಾ.ಪಂ. ಮಾಜಿ ಸದಸ್ಯ ವಿಜು ಅವರನ್ನು ಆಯ್ಕೆ ಮಾಡಲಾಯಿತು. ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಆರ್.ಕೆ. ಚಂದ್ರು, ಗ್ರಾಪಂ ಮಾಜಿ ಸದಸ್ಯ ಮಾವಾಜಿ ರವಿ, ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ನವೀನ್ ಇದ್ದರು.