ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಚೇರಿ ಎದುರು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಯಿತು. ಅಪ್ಪಚ್ಚು ರಂಜನ್, ಮೇದಪ್ಪ, ಗೌತಮ್, ಮಹೇಶ್, ಕವಿತಾ ಇದ್ದರು.
ಸೋಮವಾರಪೇಟೆ: ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದರು.
ಬಿಜೆಪಿ ಮಂಡಲ ವತಿಯಿಂದ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ವಿಚಾರದಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತದ್ದಾಗಿದೆ. ರಾಜ್ಯ ಸರ್ಕಾರ ಮುಖ್ಯಮಂತ್ರಿ ಹುದ್ದೆ ಸಂಬಂಧಿತ ರಾಜಕೀಯದಲ್ಲೇ ತೊಡಗಿಸಿಕೊಂಡಿದ್ದು, ಜನಪರ ಆಡಳಿತ ಕಡೆಗಣಿಸಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.
ಗ್ರಾಮ, ತಾಲೂಕು ಪಂಚಾಯಿತಿಗಳ ಅವಧಿ ಮುಗಿದು ಹಲವು ವರ್ಷಗಳಾದರೂ ಸರ್ಕಾರ ಚುನಾವಣೆ ನಡೆಸಿಲ್ಲ. ಇದಕ್ಕೆ ಕಾರಣ ಹಣದ ಕೊರತೆ. ಜಿಲ್ಲೆಯ ರಸ್ತೆಗಳು ಗುಂಡಿಗಳಿಂದ ಹಾಳಾಗಿದ್ದು ಅವುಗಳನ್ನು ಸರಿಪಡಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಹಿಂದಿನ ಸರ್ಕಾರಗಳು ಅಧಿಕಾರ ವಿಕೇಂದ್ರೀಕರಣದ ಮೂಲಕ ಜನಸಾಮಾನ್ಯರಿಗೆ ಅಧಿಕಾರ ನೀಡಿದ್ದವು. ಆದರೆ, ಇಂದಿನ ಸರ್ಕಾರ ಚುನಾವಣೆ ನಡೆಸದೆ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಭಾರತೀಶ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿರುವುದರಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡ ರಾಜ್ಯ ಸರ್ಕಾರ ಜನರ ಅಧಿಕಾರ ವಿಕೇಂದ್ರೀಕರಣದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಹಾಜರಿರಲಿಲ್ಲ ಎಂಬುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಸೋಮವಾರದಂದು ಅಧಿಕಾರಿಗಳು ಕಚೇರಿಯಲ್ಲಿ ಹಾಜರಿರಬೇಕು ಎಂಬ ನಿಯಮವಿದ್ದರೂ, ಅವರು ಗೈರುಹಾಜರಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷರಾದ ವಿ.ಕೆ. ಲೋಕೇಶ್, ಮನುಕುಮಾರ್ ರೈ, ಅನಂತ್ ಕುಮಾರ್, ಬಿಜೆಪಿ ಮಂಡಲ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಹಿಂದುಳಿದ ವರ್ಗದ ಅಧ್ಯಕ್ಷ ಸುನೀಲ್, ಎಸ್‌ಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಯುವ ಮೋರ್ಚಾ ಅಧ್ಯಕ್ಷ ಮೋಹಿತ್ ಮತ್ತಿತರರು ಇದ್ದರು.