ಕೆ ಜಿ ಬೋಪಯ್ಯ ಎಂ.ಪಿ. ಅಪ್ಪಚ್ಚುರಂಜನ್
ಜಮ್ಮಾ ಭೂಮಿ ವಿಷಯದಲ್ಲಿ ಚರ್ಚೆಗೆ ಬಿಜೆಪಿ ಯಾವಾಗಲೂ ಸಿದ್ಧರಿದ್ದು ಇದಕ್ಕೆ ಆಡಳಿತ ಪಕ್ಚದವರು ವೇದಿಕೆ ಸಿದ್ಧಪಡಿಸಲಿ
ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದರು. ಕೊಡಗಿನ ಜನ ನೆಮ್ಮದಿಯಲ್ಲಿ ಇರಬೇಕು. ಹಾಗಾಗಿ ಅವರ ಭಾಷೆಯಲ್ಲಿ ಉತ್ತರ ಕೊಡಲು ಹೋಗುವುದಿಲ್ಲ. ನಾವು ಹೋರಾಟ ಮಾಡಿಕೊಂಡು ಬಂದವರು. ಹೋರಾಟ ನಮಗೆ ಹೊಸದಲ್ಲ.
ಕೊಡಗಿನಲ್ಲಿ ಜಮ್ಮಾ ಬಾಣೆ ಸಮಸ್ಯೆ ಬಹಳ ಹಳೆಯದ್ದು. ಕಾಂಗ್ರೆಸ್ ಸರ್ಕಾರಗಳು ಜಮ್ಮಾ ಬಾಣೆ ಜಾಗ ಸರ್ಕಾರಕ್ಕೆ ಸೇರಿದ್ದು ಎಂಬ ನಿಲುವನ್ನು ಸುತ್ತೋಲೆಗಳ ಮೂಲಕ ಹೇಳುತ್ತಾ ಬಂದಿದೆ. ಇದರ ವಿರುದ್ಧ ಅನೇಕ ಹೋರಾಟಗಳನ್ನು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ನಡೆಸಲಾಗಿದೆ. 2006ರ ನವೆಂಬರ್ 1ರಂದು ಕನ್ನಡರಾಜ್ಯೋತ್ಸವ ಬಹಿಷ್ಕರಿಸಿ ಕೊಡಗು ಬಂದ್ ಕೂಡ ನಡೆಸಲಾಗಿತ್ತು. ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಹೋರಾಡುತ್ತಲೇ ಬಂದಿದೆ. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಜಮ್ಮಾ ಬಾಣೆ ಸುತ್ತೋಲೆ ವಾಪಸ್ ಪಡೆದುಕೊಳ್ಳಲಾಗಿತ್ತು. ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಗ 2011ರಲ್ಲಿ ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಜಮ್ಮಾ ಹಿಡುವಳಿ ಮತ್ತು ಕಂದಾಯ ವಿಧಿಸುವ ಅವಕಾಶ ಮಾಡಿಕೊಟ್ಟಿದ್ದರೂ ಅಂದಿನ ರಾಜ್ಯಪಾಲರು ಒಪ್ಪಿಗೆ ಕೊಟ್ಟಿರಲಿಲ್ಲ. 2012ರಲ್ಲಿ ರಾಷ್ಟçಪತಿ ಒಪ್ಪಿಗೆ ಕೊಟ್ಟು 2012ರ ಫೆ.1ಕ್ಕೆ ಕಾಯಿದೆ ಜಾರಿಗೆ ಬಂದಿದ್ದರೂ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿರಲಿಲ್ಲ. ಇದರ ಬದಲು ಕಾಂಗ್ರೆಸ್‌ನ ಕೆಲವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ರಿಟ್ ಅರ್ಜಿಗಳನ್ನು ವಜಾ ಮಾಡಿ 30 ದಿನಗಳ ಒಳಗಾಗಿ ತಿದ್ದುಪಡಿ ಜಾರಿ ಮಾಡುವಂತೆ 2024ರ ಜು.25ರಂದು ತೀರ್ಪು ನೀಡಿತ್ತು. ಆದರೆ ಬಿಜೆಪಿ ಸರ್ಕಾರದ ತಿದ್ದುಪಡಿಯನ್ನು ಜಾರಿಗೆ ತರಲು ಆಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನವರು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನವರು ತಂದ ತಿದ್ದುಪಡಿಯ ಟಿಪ್ಪಣಿಯಲ್ಲಿ ಈ ಅಂಶದ ಪ್ರಸ್ತಾಪವೇ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಭೂಕಂದಾಯ ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಕೊಡಗಿನ ಪಟ್ಟೆದಾರರಿಗೆ ಬ್ರಿಟಿಷ್ ಏಜೆಂಟರು ಎನ್ನುವ ಹಣೆಪಟ್ಟಿ ಅಂಟಿಸಿದ್ದು ಬಿಟ್ಟರೆ ಬೇರೇನೂ ಪ್ರಯೋಜನ ಆಗಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನಲ್ಲಿ ಕೊಡಗಿನ ಜಮ್ಮಾ ಭೂಮಿಗೆ ಸಂಬAಧಿಸಿದ ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿಗಳನ್ನು ಮಂಡಿಸುವ ಸಂದರ್ಭ ಕಂದಾಯ ಸಚಿವರು ಕೊಡಗಿನ ಪಟ್ಟೆದಾರರನ್ನು ಬ್ರಿಟಿಷ್ ಏಜೆಂಟರು ಎಂದು ಕರೆಯುವ ಮೂಲಕ ಅವಮಾನ ಮಾಡಿದ್ದಾರೆ. ಕಂದಾಯ ಸಚಿವರಿಗೆ ಕೊಡಗಿನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕರು ಇದನ್ನು ವಿರೋಧಿಸಬೇಕಿತ್ತು ಎಂದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಶೇ. 90 ಕೆಲಸ ಮಾಡಿದ್ದು ನಾವು. ಉಳಿದ ಶೇ.10 ಕೆಲಸ ಮಾಡಿದ್ದೇ ದೊಡ್ಡ ಸಾಧನೆ ಎಂದು ಡಂಗುರ ಸಾರಲಾಗುತ್ತಿದೆ. ಬಾಯಿಗೆ ಬಂದAತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಕೊಡಗಿನ ಹಿತದೃಷ್ಟಿ ವಿಷಯ ಬಂದಾಗ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ ಜಮ್ಮಾ ಬಾಣೆ ವಿಷಯ ಮಾತ್ರವಲ್ಲದೆ ಎಲ್ಲಾ ವಿಷಯದಲ್ಲೂ ಕಾಂಗ್ರೆಸ್‌ನವರು ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಮಾಡುತ್ತಿದ್ದಾರೆ. ವಿಬಿ ಜಿ ರಾಮ್ ಜಿ ವಿಷಯದಲ್ಲೂ ಹೀಗೆಯೇ ಮಾಡುತ್ತಿದ್ದಾರೆ. ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.40 ಪಾಲು ಕೊಡಬೇಕು. ಇದು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಹಾಗಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಇದ್ದರು.