ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ವಿರಾಜಪೇಟೆ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು. ಸುವಿನ್ ಗಣಪತಿ, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ, ಕಾಂತಿ, ಅಜಿತ್, ಚಲನ್ ಇತರರಿದ್ದರು. 
ಕೊಡಗು

ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿ ಗುರಿ

ಎ. ಆರ್. ರಘುರಾಮ
ವಿರಾಜಪೇಟೆ : ದೇಶ ಮೊದಲು, ಪಕ್ಷ ಮತ್ತು ವ್ಯಕ್ತಿಗಳು ನಂತರ ಎಂಬ ಧ್ಯೇಯ ನಮ್ಮದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಪ್ರಶಿಕ್ಷಣಾ ಮಹಾಭಿಯಾನದ ವಿಭಾಗೀಯ ಸಂಚಾಲಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಅಮ್ಮತ್ತಿಯ ಕೊಡವ ಸಮಾಜದ ಸಭಾಂಗಣದಲ್ಲಿ ಇತೀಚೆಗೆ ನಡೆದ ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ, ವಿರಾಜಪೇಟೆ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಇತರ ರಾಜಕೀಯ ಪಕ್ಷಗಳಿಂದ ಭಿನ್ನವಾಗಿದೆ. ಸಂಘಟನೆ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವು ಪ್ರಶಿಕ್ಷಣದ ಮುಖ್ಯ ಗುರಿ. ವ್ಯಕ್ತಿ ನಿರ್ಮಾಣದ ಮೂಲಕ ಸಂಘ ನಿಮಾರ್ಣ, ಸಂಘದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದೇ ಬಿಜೆಪಿ ಮೂಲ ಗುರಿ. ಕಾರ್ಯಕರ್ತನಲ್ಲಿ ವೈಚಾರಿಕ ಬದ್ಧತೆ ಬೆಳೆಸುವುದು, ಪಕ್ಷದ ಕಾರ್ಯವೈಖರಿ ತಿಳಿಸುವುದು, ಕಾರ್ಯಕರ್ತರ ನಡತೆಯಲ್ಲಿ ಶ್ರೇಷ್ಠತೆ ರೂಪಿಸುವುದು ಮಾತ್ರವಲ್ಲದೆ ಪದಾಧಿಕಾರಿ, ಕಾರ್ಯಕರ್ತನಿಗೆ ಪಕ್ಷದ ವಿಕಾಸ, ಇತಿಹಾಸ ತಿಳಿಸಿ ಕೊಡಲಾಗುವುದು. ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕ ಬದ್ಧತೆ ಬೆಳೆಸುವುದು, ಸಾಮಾಜಿಕ ಸಂವೇದನೆ, ಜವಾಬ್ದಾರಿ ಮೂಡಿಸುವುದು, ರಾಷ್ಟ್ರೀಯ ಅಂತಾರಾಷ್ಟ್ರೀಯ ನರೇಟಿವ್‌ಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಪ್ರಶಿಕ್ಷಣದ್ದು ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಜೀ ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನಕ್ಕೆ ಫೆ. 5ರಂದು ಚಾಲನೆ ಕೊಟ್ಟಿದ್ದಾರೆ. ಬಿಜೆಪಿ ಸಂಘಟನಾ ಪರ್ವ ಪ್ರಾರಂಭವಾಗಿದೆ. ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯರ ಅಭಿಯಾನ, ಬೂತ್, ಮಂಡಲ, ಜಿಲ್ಲಾ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಸಂಘಟನಾ ಪರ್ವ ನಡೆಯುತ್ತದೆ ಎಂದು ವಿವರಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ಮೊದಲ ಪಾಠವಾಗಿ ಶಿಸ್ತನ್ನೇ ಕಲಿಸಲಾಗುತ್ತದೆ. ಇತರ ರಾಜಕೀಯ ಪಕ್ಷಗಳಿಗಿಂತ ಸಿದ್ಧಾಂತ ಮತ್ತು ಕಾರ್ಯವೈಖರಿಯಲ್ಲಿ ವಿಭಿನ್ನವಾಗಿದೆ. ಇದನ್ನು ಕಾರ್ಯಕರ್ತರು ಮೊದಲು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಕಾರ್ಯಕರ್ತರು ಕೇವಲ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವವರಲ್ಲ. ಬದಲಾಗಿ, ಸಮಾಜದ ಪ್ರತಿಯೊಂದು ಹಂತದಲ್ಲೂ ಜನರ ಸೇವೆ ಮಾಡಲು ಸದಾ ಸಿದ್ಧರಿರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿರಾಜಪೇಟೆ ಮಂಡಲದ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪ್ರಶಿಕ್ಷಣ ಅಭಿಯಾನದ ಸಂಚಾಲಕ ನೆಲ್ಲಿರ ಚಲನ್, ಮಾಜಿ ಶಾಸಕ ಅಪ್ಪಚ್ಚು ರಂಜನ್, ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ, ಮಂಗಳೂರು ವಿಭಾಗದ ಉಸ್ತುವಾರಿ ಬಿ.ಬಿ. ಭಾರತೀಶ್, ವಿರಾಜಪೇಟೆ ಮಂಡಲದ ಎಲ್ಲ ಪದಾಧಿಕಾರಿಗಳು, ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಬಿಜೆಪಿಯ ಮಾಜಿ ಸದಸ್ಯರು ಸೇರಿದಂತೆ ಮುಖಂಡರು ಹಾಜರಿದ್ದರು.