ಪೊನ್ನಂಪೇಟೆ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು. ಮೆಹರೋಜ್ ಖಾನ್, ತೀತಿರ ಧರ್ಮಜ ಉತ್ತಪ್ಪ, ಕಾಳಿಮಾಡ ಪ್ರಶಾಂತ್, ಲಾಲಾ ಅಪ್ಪಣ್ಣ, ಅಣ್ಣೀರ ಹರೀಶ್ ಮತ್ತಿತರರು ಇದ್ದರು. 
ಕೊಡಗು

ಪೊನ್ನಂಪೇಟೆ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ

ಪೊನ್ನಂಪೇಟೆ:
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೊನ್ನಂಪೇಟೆ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಗುರುವಾರ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ನೂತನ ಬಸ್ ನಿಲ್ದಾಣ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದ್ದು, ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಬಸ್ ನಿಲ್ದಾಣ ನಿರ್ಮಾಣ, ಪಾದಚಾರಿ ಮಾರ್ಗ, ರಸ್ತೆ ಸೌಂದರ್ಯೀಕರಣ ಹಾಗೂ ಬೀದಿ ದೀಪಗಳ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 1.48 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪೊನ್ನಂಪೇಟೆ ಪಟ್ಟಣದ ಉದ್ಯಾನವನ ಹಾಗೂ ಗೌರಿ ಕೆರೆ ಅಭಿವೃದ್ಧಿಗೆ ವಿವರ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಅಗತ್ಯ ಅನುದಾನವೂ ಲಭ್ಯವಿದೆ. ಉಳಿದಿರುವ ಅನುಮೋದನೆಗಳು ಪೂರ್ಣಗೊಂಡ ತಕ್ಷಣ ಕಾಮಗಾರಿಗಳನ್ನು ಆರಂಭಿಸಲಾಗುವುದು. ಪಟ್ಟಣದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವ ರಸ್ತೆಗಳನ್ನು ಗುರುತಿಸಿ, ಪಟ್ಟಣ ಪಂಚಾಯಿತಿ, ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಚರಂಡಿ ಹಾಗೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಕಳೆದ ನಾಲ್ಕು ವರ್ಷಗಳಿಂದ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳನ್ನು ಆದ್ಯತೆಯ ಮೇರೆಗೆ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಅಭಿವೃದ್ಧಿ ಕಾರ್ಯಗಳ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ತಲುಪಿಸುವುದು ಅಗತ್ಯವಾಗಿದ್ದು, ಟೀಕೆ-ವಿಮರ್ಶೆಗಳಿಗೆ ಪ್ರತಿಕ್ರಿಯಿಸುವುದಕ್ಕಿಂತ ಪಾರದರ್ಶಕ ಹಾಗೂ ವ್ಯವಸ್ಥಿತ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸನಿತಿ ಉಪಾಧ್ಯಕ್ಷ ಮೆಹರೋಜ್ ಖಾನ್ ಮಾತನಾಡಿ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಕೊಡಗು ಮಾತ್ರವಲ್ಲದೆ ರಾಜ್ಯ ಮಟ್ಟದಲ್ಲಿಯೂ ಜನಪ್ರಿಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ, ಹಿರಿಯ ವಕೀಲರಾಗಿ ಹಾಗೂ ಹೋರಾಟಗಾರರಾಗಿ ಅವರು ಸರ್ಕಾರಕ್ಕೆ ಸಮರ್ಪಕ ಕಾನೂನು ಸಲಹೆ ನೀಡಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಮುಂದಿನ ರಾಜ್ಯ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ದೊರೆತು ಇನ್ನಷ್ಟು ಜನಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಲಾಲಾ ಅಪ್ಪಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಉಪಾಧ್ಯಕ್ಷ ಆಲೀರ ರಶೀದ್, ಸದಸ್ಯರಾದ ಕರ್ತಮಾಡ ರಶಿಕ, ಕೋಳೆರ ಭಾರತಿ, ಮೂಕಳೇರ ಸುಮಿತ್ರಾ, ಮುಖಂಡರಾದ ಮೀದೇರಿರ ನವೀನ್, ಅಡ್ಡಂಡ ಸುನಿಲ್, ಅಜ್ಜಿಕುಟ್ಟೀರ ಪೊನ್ನು, ಮುಕ್ಕಾಟಿರ ಸಂದೀಪ್, ಶಾಜಿ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.