ಬೆಟೋಳಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪುದುಪಾಡಿ ಅಯ್ಯಪ್ಪ ದೇವಾಲಯದ ಸಭಾಭವನದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಕಾರ್ಯಾನುಭವ ಶಿಬಿರದ ವತಿಯಿಂದ ಜೇನು ಕೃಷಿ ಮಾಹಿತಿ ಕಾರ್ಯಕ್ರಮ ನಡೆಯಿತು. ಡಾ. ಕೆಂಚಾರೆಡ್ಡಿ , ಸತ್ಯಮೂರ್ತಿ , ಎಂ.ಆರ್.ಉದಯ , ಸೂರಜ್ , ವಸಂತ , ರಾಮಶರ್ಮ, ಸೀತಾ , ಸುಮಿತ್ರಾ ಬಾಯಿ, ಭವ್ಯಾ, ಸುಬ್ರಮಣಿ , ಅಶೋಕ ಇದ್ದರು.
- ಡಾ.ಆರ್.ಎನ್.ಕೆಂಚಾರೆಡ್ಡಿ ಮಾಹಿತಿ
- ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಿಂದ ಶಿಬಿರ ಆಯೋಜನೆ
ವಿರಾಜಪೇಟೆ : ಬೆಟೋಳಿ ಗ್ರಾಮದ ಪುದುಪಾಡಿ ಅಯ್ಯಪ್ಪ ದೇವಾಲಯದ ಸಭಾಭವನದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಶನಿವಾರ ಆಯೋಜಿಸಿದ್ದ ಶಿಬಿರದಲ್ಲಿ ಜೇನು ಕೃಷಿ ಕುರಿತು ಮಾಹಿತಿ ನೀಡಲಾಯಿತು.
ಕೀಟಶಾಸ್ತ್ರಜ್ಞ ಹಾಗೂ ಜೇನು ಕೃಷಿ ತಜ್ಞ ಡಾ.ಆರ್.ಎನ್.ಕೆಂಚಾರೆಡ್ಡಿ ನೇತೃತ್ವದಲ್ಲಿ ಶಿಬಿರಾರ್ಥಿಗಳಿಗೆ ಜೇನು ಕೃಷಿಯ ಮಾಹಿತಿ ನೀಡಲಾಯಿತು.
ರೈತರಿಗೆ ಜೇನು ಸಾಕಣೆ, ನಿರ್ವಹಣೆ, ಆದಾಯ ಹಾಗೂ ಜೇನು ಕೃಷಿಯಿಂದ ದೊರೆಯುವ ನೇರ ಮತ್ತು ಪರೋಕ್ಷ ಪ್ರಯೋಜನಗಳನ್ನು ತಿಳಿಸಲಾಯಿತು.
ಜೇನು ಪೆಟ್ಟಿಗೆಗಳ ಸ್ಥಾಪನೆ, ಜೇನು ಕುಟುಂಬಗಳ ನಿರ್ವಹಣೆ, ಜೇನುನೊಣಗಳ ಆರೋಗ್ಯ ರಕ್ಷಣೆ, ಆಹಾರ ವ್ಯವಸ್ಥೆ ಹಾಗೂ ಜೇನು ಸಂಗ್ರಹದ ವೈಜ್ಞಾನಿಕ ವಿಧಾನಗಳು, ಜೇನುತುಪ್ಪದ ಜತೆ ಜೇನುಮೇಣ, ರಾಯಲ್ ಜೆಲ್ಲಿ ಮುಂತಾದ ಉಪ ಉತ್ಪನ್ನಗಳ ಮೂಲಕವೂ ಹೆಚ್ಚುವರಿ ಆದಾಯ ಗಳಿಸಬಹುದು. ಜೇನುನೊಣಗಳ ಪರಾಗಸ್ಪರ್ಶ ಕ್ರಿಯೆಯಿಂದ ಬೆಳೆಗಳ ಉತ್ಪಾದಕತೆ ಹೆಚ್ಚುವುದರಿಂದ ಜೇನು ಕೃಷಿಯು ರೈತರಿಗೆ ನೇರ ಆದಾಯದ ಜತೆಗೆ ಕೃಷಿಯಲ್ಲಿ ಪರೋಕ್ಷ ಆರ್ಥಿಕ ಪ್ರಯೋಜನ ನೀಡುತ್ತದೆ. ಪರಾಗಸ್ಪರ್ಶದ ಪರಿಣಾಮವಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿ ಹೆಚ್ಚಾಗುವ ಬಗ್ಗೆ ಡಾ.ಆರ್.ಎನ್.ಕೆಂಚಾರೆಡ್ಡಿ ಅರಿವು ಮೂಡಿಸಿದರು.
ಕೊಡಗಿನ ವೈವಿಧ್ಯಮಯ ಅರಣ್ಯ, ಕಾಫಿ ತೋಟಗಳು, ಏಲಕ್ಕಿ ಹಾಗೂ ವಿವಿಧ ಹೂವಿನ ಸಸ್ಯಗಳಿಂದ ಜೇನುನೊಣಗಳು ಮಕರಂದ ಸಂಗ್ರಹಿಸುವುದರಿಂದ ಕೊಡಗಿನ ಜೇನುತುಪ್ಪವು ವಿಶಿಷ್ಟ ರುಚಿ, ಸುವಾಸನೆ ಮತ್ತು ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದಕ್ಕೆ ಗುಣಮಟ್ಟದ ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಜೇನು ಕೃಷಿಕರಿಗೆ ಉತ್ತಮ ಮೌಲ್ಯ ಹಾಗೂ ಹೆಚ್ಚುವರಿ ಆದಾಯ ದೊರೆಯುವ ಅವಕಾಶವಿದೆ ಎಂದು ಡಾ.ಆರ್.ಎನ್.ಕೆಂಚಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಸತ್ಯಮೂರ್ತಿ, ಎಂ.ಆರ್.ಉದಯ, ಸೂರಜ್, ವಸಂತ, ರಾಮಶರ್ಮ, ಸೀತಾ, ಸುಮಿತ್ರಾ ಬಾಯಿ, ಭವ್ಯಾ, ಸುಬ್ರಮಣಿ, ಅಶೋಕ ಇತರರು ಇದ್ದರು.