ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಸಂಜೀವಿನಿ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ 2 ದಿನಗಳ ಮಾಸಿಕ ಸಂತೆಯನ್ನು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಉದ್ಘಾಟಿಸಿದರು. ನವ್ಯಾ, ಸುಮಾ, ಭುವನೇಶ್ವರಿ ಇತರರು ಇದ್ದರು. 
ಕೊಡಗು

ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • self-sufficient
ಸುಂಟಿಕೊಪ್ಪ:ಸರ್ಕಾರಿ ಸೌಲಭ್ಯಗಳ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಿಗುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳ್ಳುವತ್ತ ಮನಸ್ಸು ಮಾಡಿ ಎಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮತ್ತು ಕೊಡಗರಹಳ್ಳಿ ಗ್ರಾಪಂ ಆಡಳಿತಾಧಿಕಾರಿ ವೀರಣ್ಣ ಕರೆ ನೀಡಿದರು.
ಕೊಡಗರಹಳ್ಳಿ ಗ್ರಾಪಂ ಮತ್ತು ಸಂಜೀವಿನಿ ಒಕ್ಕೂಟದ ವತಿಯಿಂದ ಕೊಡಗರಹಳ್ಳಿ ನೇತಾಜಿ ಭವನದಲ್ಲಿ ಆಯೋಜಿಸಲಾಗಿದ್ದ 2 ದಿನಗಳ ಮಾಸಿಕ ಸಂತೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ರೂಪಿಸಿ ಸಾಲ ಸೌಲಭ್ಯ ಮತ್ತು ಧನಸಹಾಯ ನೀಡುತ್ತಿದೆ. ಇವುಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ಸಂಸ್ಥೆಯ ಕೂಡಿಗೆ ಕೇಂದ್ರದಿಂದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ ನವ್ಯಾ ಮಾತನಾಡಿ, ಬ್ಯಾಂಕ್ ವತಿಯಿಂದ ಊಟ ವಸತಿಯೊಂದಿಗೆ 64 ವಿವಿಧ ಸ್ವಉದ್ಯೋಗದ ಸಂಬಂಧ ಉಚಿತ ತರಬೇತಿ ನೀಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆಯಲ್ಲ, ಉದ್ಯೋಗ ಮಾಡುವವವರಿಗೆ ನೂರೆಂಟು ಮಾರ್ಗಗಳು ಇವೆ ಎಂದು ತಿಳಿಸಿದರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಾ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರಿಗೆ ಸಾರ್ವಜನಿಕ ಮತ್ತು ವ್ಯವಹಾರಿಕ ಜೀವನವನ್ನು ಮಾಸಿಕ ಸಂತೆ ತೋರಿಸಿಕೊಟ್ಟಿದೆ. ಸ್ವ ಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆಗೊಳ್ಳಬೇಕು ಎಂದು ತಿಳಿಸಿದರು.
ಕಂಬಿಬಾಣೆಯ ಬ್ರಹ್ಮಜ್ಞಾನ ಮಂದಿರ ವತಿಯಿಂದ ಮಾಸಿಕ ಸಂತೆಯಲ್ಲಿ ಪಾಲ್ಗೊಂಡವರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಚಿತವಾಗಿ ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ವಿತರಿಸಲಾಯಿತು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ, ಉಪಾಧ್ಯಕ್ಷೆ ಇಂದಿರಾ, ಖಜಾಂಜಿ ಪುಷ್ಪಾಲತಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರವೀಶ್, ನಿಕಟಪೂರ್ವ ಸದಸ್ಯೆ ಕಲಾಮಣಿ, ಸಂಜೀವಿನಿ ಒಕ್ಕೂಟದ ಮುಖ್ಯಲೆಕ್ಕಾಧಿಕಾರಿ ಶಾರದಾ, ಮೇಲ್ವಿಚಾರಕಿ ಪದ್ಮಶ್ರೀ, ಸ್ಥಳೀಯ ಸಂಪನ್ನೂಲ ವ್ಯಕ್ತಿ ಪೂರ್ಣಿಮಾ, ಒಕ್ಕೂಟದ ತಾಲೂಕು ವ್ಯವಸ್ಥಾಪಕ ರವಿ, ಸಬಲದ ರೇವಣ್ಣ ಸಿದ್ದಪ್ಪ, ಪ್ರಸನ್ನ ಸೇರಿದಂತೆ 7ನೇ ಹೊಸಕೋಟೆ, ಸುಂಟಿಕೊಪ್ಪ, ನಾಕೂರು ಶಿರಂಗಾಲ, ಮಾದಾಪುರ ವ್ಯಾಪ್ತಿಯ ಪ್ರತಿನಿಧಿಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.