ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ನಡೆದ ಫುಟ್ಬಾಲ್ ಸೆಮಿಫೈನಲ್ ಪಂದ್ಯದಲ್ಲಿ ಗೋಲು ಗಳಿಸಲು ಆಟಗಾರರು ಸೆಣಸುತ್ತಿರುವುದು. 
ಕೊಡಗು

ಬೀಟಿಕಟ್ಟೆ ನೀಲ್‌ಶಾಂತ್ ಬಾಯ್ಸ, ಎಫ್‌ಸಿ ಗೌಡಳ್ಳಿ ತಂಡ ಫೈನಲ್‌ಗೆ

ಪ್ರಮುಖ ಮುಖ್ಯಾಂಶಗಳು

  • ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನ
  • ಓಂ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯ ಸಮಿತಿ
  • ಮುಕ್ತ ಫುಟ್ಬಾಲ್ ಪಂದ್ಯಾವಳಿ
ಸೋಮವಾರಪೇಟೆ: ತಾಲೂಕಿನ ಗೌಡಳ್ಳಿಯ ಬಿಜಿಎಸ್ ಶಾಲಾ ಮೈದಾನದಲ್ಲಿ ಓಂ ಶ್ರೀ ನವದುರ್ಗಾಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಆಯೋಜಿಸಿದ್ದ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬೀಟಿಕಟ್ಟೆ ನೀಲ್‌ಶಾಂತ್ ಬಾಯ್ಸ ಹಾಗೂ ಎಫ್‌ಸಿ ಗೌಡಳ್ಳಿ ತಂಡಗಳು ಫೈನಲ್‌ಗೆ ಪ್ರವೇಶ ಪಡೆದಿವೆ.
ಕ್ರೀಡಾಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳು ತೀವ್ರ ರೋಚಕತೆ ಮೂಡಿಸಿತು. ಮೊದಲ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೌಡಳ್ಳಿ ತಂಡ ನಿಶಾಂತ್ ಕಾಫಿ ಗ್ರೂಪ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೇರಿತು. ಎರಡನೇ ಸೆಮಿಫೈನಲ್‌ನಲ್ಲಿ ನೀಲ್‌ಶಾಂತ್ ಬಾಯ್ಸ ತಂಡ ಡೈಮಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲೂ ಉತ್ಸಾಹಭರಿತ ಪೈಪೋಟಿ ಕಂಡುಬಂದಿದ್ದು, ದುಗಾರ್ಂಬ ಹಾಗೂ ಅಗ್ನಿ ಕ್ಲಬ್ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟಿವೆ. ಗ್ರಾಮೀಣ ಪ್ರದೇಶದ ಮಹಿಳೆಯರ ಕ್ರೀಡಾ ಚಟುವಟಿಕೆಗೆ ಈ ಪಂದ್ಯಾವಳಿ ವೇದಿಕೆ ಒದಗಿಸಿತು.
ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ ಶುಕ್ರವಾರ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಜಾತ್ರೋತ್ಸವ ಹಾಗೂ ಗ್ರಾಮೀಣ ಕ್ರೀಡಾಕೂಟಗಳ ಮಹತ್ವವನ್ನು ವಿವರಿಸಿದರು. ಜಾತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್. ಮಂಜುನಾಥ್, ಗ್ರಾಮೀಣ ಸಂಸ್ಕೃತಿ ಉಳಿವಿನಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದೆಂದು ಹೇಳಿದರು.
ಇದೇ ವೇಳೆ ಪಶು ಇಲಾಖೆಯ ವೈದ್ಯಾಧಿಕಾರಿ ಸತೀಶ್ ಕುಮಾರ್ ರಾಸುಗಳಿಗೆ ಚಿಕಿತ್ಸೆ ನೀಡುವ ಮೂಲಕ ಪಶುವೈದ್ಯಕೀಯ ಶಿಬಿರ ನಡೆಸಿದರು. ಶನಿವಾರ ಪುರುಷರು ಹಾಗೂ ಮಹಿಳೆಯರಿಗಾಗಿ ಗುಡ್ಡಗಾಡು ಓಟ, ಮಹಿಳೆಯರ ರಂಗೋಲಿ ಸ್ಪರ್ಧೆ, ಬಸ್ ಹುಡುಕಾಟ ಸ್ಪರ್ಧೆ ಹಾಗೂ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ನಡೆದವು. ಸಮಿತಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ವಿಶ್ವರೂಪಾಚಾರ್, ಖಜಾಂಚಿ ಟಿ.ಆರ್. ರಾಮಚಂದ್ರ ಇತರರಿದ್ದರು.