ಮಳೆಗಾಲದ ಹಿನ್ನೆಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ಕುಶಾಲನಗರ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಡೆಯಿತು. ವಿ.ಪಿ. ಶಶಿಧರ್, ಪ್ರಮೋದ್ ಮುತ್ತಪ್ಪ, ಕೃಷ್ಣಮೂರ್ತಿ, ಅಪ್ಪಣ್ಣ ಇದ್ದರು.
ಕೊಡಗಿನಲ್ಲೂ ಮುಂಗಾರು ಆರಂಭಗೊAಡಿರುವುರಿAದ ಜನ-ಜಾನುವಾರು, ಆಸ್ತಿ-ಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿ ಆಗದಂತೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸೂಚಿಸಿದ್ದಾರೆ. ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ನಿರ್ವಹಣೆಗಾಗಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.
ಕುಶಾಲನಗರ ತಾಲೂಕಿನಾದ್ಯಂತ ಸೂಕ್ಷö್ಮ ಪ್ರದೇಶಗಳಿದ್ದು ಮಳೆಗಾಲದ ಸಂದರ್ಭ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಹಾರಂಗಿ ಜಲಾಶಯ, ಚಿಕ್ಲಿಹೊಳೆ ಅಣೆಕಟ್ಟೆ, 2018, 2019ರಲ್ಲಿ ಪ್ರವಾಹಕ್ಕೆ ಹೆಚ್ಚು ಒಳಗಾಗಿದ್ದ ಪ್ರದೇಶಗಳು ಕುಶಾಲನಗರ ತಾಲೂಕಿನಲ್ಲಿ ಇರುವುದರಿಂದ ಅಧಿಕಾರಿಗಳು ಸಾಕಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸ್ಥಳ ಬಿಟ್ಟು ತೆರಳಬಾರದು. ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಕಳೆದ 2 ವರ್ಷ ಮಳೆಗಾಲವನ್ನು ದೊಡ್ಡ ಪ್ರಮಾಣದ ಸಮಸ್ಯೆಗಳು ಉದ್ಭವಿಸದಂತೆ ಎದುರಿಸಲಾಗಿದೆ. ಈ ವರ್ಷವೂ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಇದಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ತಮ್ಮ ಕಡೆಯಿಂದ ನೀಡಲಾಗುವುದು.
ಮಳೆಯ ಪ್ರಮಾಣ ಹೆಚ್ಚಾದಾಗ ನದಿ ಅಂಚಿನ ಅಪಾಯಕಾರಿ ಪ್ರದೇಶಗಳನ್ನು ಒಳಗೊಂಡಿರುವ ನೆಲ್ಲಿಹುದಿಕೇರಿ, ಬಾಳುಗೋಡು, ತ್ಯಾಗತ್ತೂರು, ನಂಜರಾಯಪಟ್ಟಣ, ಹೊಸಪಟ್ಟಣ, ಗುಡ್ಡೆಹೊಸೂರು, ಕುಶಾಲನಗರ ಪುರಸಭೆ ವ್ಯಾಪ್ತಿಯ ಇಂದಿರಾ ಬಡಾವಣೆ, ಸಾಯಿ ಬಡಾವಣೆ, ಕುವೆಂಪು ಬಡಾವಣೆ ಸೇರಿದಂತೆ ನದಿಯಂಚಿನ ಬಡಾವಣೆಗಳು, ಕೂಡುಮಂಗಳೂರು, ಕೂಡಿಗೆ, ಕಣಿವೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಭಾಗದಲ್ಲಿ ಮನೆಗಳಿಗೆ ಕಾವೇರಿ ನದಿ ನೀರು ನುಗ್ಗಿ ಜಲಾವೃತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ಅಂಚಿನಲ್ಲಿರುವ ಮನೆಗಳಿಗೆ ನೋಟಿಸ್ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕೆಲವು ಕಡೆಗಳಲ್ಲಿ ಹಳೆಯ ಮತ್ತು ಅಸುರಕ್ಷಿತ ಕಟ್ಟಡಗಳು ಇರುವ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಇಂಥ ಮನೆಗಳನ್ನು ಗುರುತು ಮಾಡಿ ಆ ಮನೆಗಳಿಗೆ ನೋಟಿಸ್ ಕೊಡಬೇಕು. ಆ ರೀತಿಯ ಕಟ್ಟಡಗಳಲ್ಲಿ ವಾಸ ಮಾಡುತ್ತಿರುವವರನ್ನು ಅಲ್ಲಿಂದ ಖಾಲಿ ಮಾಡಿಸಿ ಸಾಧ್ಯವಾದರೆ ಬೇರೆ ಕಡೆಗೆ ಸ್ಥಳಾಂತರ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಳೆಯ ಕಟ್ಟಡಗಳಿಂದ ಮಳೆಗಾಲದಲ್ಲಿ ಯಾವುದೇ ರೀತಿಯ ಹಾನಿ ಆಗಬಾರದು.
ಮಳೆಗಾಲದಲ್ಲಿ ಚರಂಡಿಯ ಸ್ವಚ್ಛತೆ ಮತ್ತು ರಸ್ತೆಗಳ ನಿರ್ವಹಣೆಗೆ ಪ್ರಾಮುಖ್ಯತೆ ಕೊಡಬೇಕು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಚರಂಡಿ, ರಸ್ತೆಗಳ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಚರಂಡಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಆದ್ಯತೆ ಆಗಬೇಕು. ಗುಂಡಿ ಬಿದ್ದ ರಸ್ತೆಗಳಿಗೆ ವೆಟ್ ಮಿಕ್ಸ್ ಹಾಕಿ ಮುಚ್ಚಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಹಾಜರಿದ್ದ ಪಿಡಿಒ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ 2018ರಿಂದ ಈಚೆಗೆ ಕುಶಾಲನಗರ ಪುರಸಭೆ ವ್ಯಾಪ್ತಿಯ ನದಿಯಂಚಿನ ಬಡಾವಣೆಗಳು ಸೇರಿದಂತೆ ತಾಲೂಕಿನ ನದಿ ಬದಿಯ ನಿವಾಸಿಗಳು ಮಳೆಗಾಲವನ್ನು ಆತಂಕದಿAದಲೇ ಕಳೆಯುವಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ನದಿ ಬದಿಯ ಮನೆಗಳಿಗೆ ಹಾನಿ ಉಂಟಾಗುತ್ತಿರುವುದು ಸಾಮಾನ್ಯ ಸಂಗತಿ ಎನ್ನುವಂತೆ ಆಗಿದೆ. ಹಾಗಾಗಿ ನದಿ ದಡದಲ್ಲಿ ಕಟ್ಟಿರುವ ಅಸುರಕ್ಷಿತ ಮನೆಗಳನ್ನು ತೆರವುಗೊಳಿಸಬೇಕು. ಅವರಿಗೆ ಪರ್ಯಾಯವಾಗಿ ಶಾಶ್ವತವಾದ ವಸತಿ ಯೋಜನೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಮಳೆಯ ಸಂದರ್ಭ ತಾಲೂಕಿನಲ್ಲಿ ಹೆಚ್ಚಿನ ಹಾನಿ ಆಗದಂತೆ ನೋಡಿಕೊಳ್ಳಲು ಪಿಡಿಒಗಳು ಕಂದಾಯ ಅಧಿಕಾರಿಗಳ ಜತೆ ಕೈ ಜೋಡಿಸಬೇಕು. ಎಲ್ಲಾ ಇಲಾಖೆಗಳು ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಮಾತನಾಡಿ ಮಳೆಗಾಲದ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಸಂಭವಿಸದAತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛತೆ ಮಾಡಿಕೊಳ್ಳಬೇಕು. ಅಪಾಯಕಾರಿ ಸ್ಥಿತಿಯಲ್ಲಿರುವ ವಾಸದ ಮನೆಗಳನ್ನು ಗುರುತಿಸಿ ಅವರಿಗೆ ನೋಟಿಸ್ ನೀಡಬೇಕು ಎಂದು ತಿಳಿಸಲಾಗಿದೆ. ಮಳೆಗಾಲದ ಸಂದರ್ಭ ಪ್ರಕೃತಿ ವಿಕೋಪ ಉಂಟಾದಲ್ಲಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಇದ್ದು ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕೆAದು ಸೂಚಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಅಂಕಿ-ಅAಶಗಳೊAದಿಗೆ ಸಭೆಯಲ್ಲಿ ಮಂಡಿಸಿದರು.
ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ತಹಸೀಲ್ದಾರ್ ಕೃಷ್ಣಮೂರ್ತಿ ಇದ್ದರು.