ಲೋಗೋ 
ಕೊಡಗು

ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿ

ಲಲಾಟಾಕ್ಷ ಎಸ್
ಪೊನ್ನಂಪೇಟೆ: ಅಖಿಲ ಅಮ್ಮ ಕೊಡವ ಸಮಾಜದ ವತಿಯಿಂದ, ಬಾನಂಡ ಕುಟುಂಬದ ಸಹಯೋಗದಲ್ಲಿ ಬಾನಂಡ ಕಪ್ ಕ್ರಿಕೆಟ್ ಪಂದ್ಯಾವಳಿ ಮೇ 1ರಿಂದ 3ರವರೆಗೆ ದಕ್ಷಿಣ ಕೊಡಗಿನ ಮಾಯಮುಡಿ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಎನ್.ಪ್ರತ್ಯು ತಿಳಿಸಿದ್ದಾರೆ.
ಇದು ದ್ವಿತೀಯ ಆವೃತ್ತಿಯ ಪಂದ್ಯಾವಳಿಯಾಗಿದ್ದು ಅಮ್ಮ ಕೊಡವ ಸಮುದಾಯದ ಸುಮಾರು 24 ಕುಟುಂಬಗಳ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪಂದ್ಯಗಳು ಆರು ಓವರ್‌ಗಳಿಗೆ ಸೀಮಿತವಾಗಿದ್ದು ಅಂತಿಮ ಪಂದ್ಯವನ್ನು 8 ಓವರ್‌ಗೆ ಸೀಮಿತಗೊಳಿಸಲಾಗಿದೆ. ಬೆಳಗ್ಗೆ 8 ಗಂಟೆಗೆ ಮಾಯಮುಡಿಯ ಶ್ರೀರಾಮ ಮಂದಿರದಿಂದ ಅಮ್ಮ ಕೊಡವರ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ನಂತರ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಕಳೆದ ಬಾರಿ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು 5 ಲಕ್ಷ ರೂ. ಅನುದಾನ ನೀಡಿದ್ದರು. ಈ ಬಾರಿ 25 ಲಕ್ಷ ರೂ.ನೆರವು ನೀಡಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಗೆ ಬೆಳಗ್ಗೆ 10 ಗಂಟೆಗೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಬಾನಂಡ ಕುಟುಂಬದ ಅಧ್ಯಕ್ಷ ಬಾನಂಡ ಎಸ್.ರಮೇಶ್ ಅಧ್ಯಕ್ಷತೆ ವಹಿಸುವರು. ಬಾನಂಡ ಎನ್.ಪ್ರತ್ಯು, ಸಚಿವ ಕೆ.ಜೆ.ಜಾರ್ಜ್, ಶಾಸಕ ಡಾ.ಮಂತರ್ ಗೌಡ, ನ್ಯಾಯಾಧೀಶೆ ಅಮ್ಮತ್ತೀರ ಶಿಲ್ಪಾ ಗಣೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಹೈಕೋರ್ಟ್ ವಕೀಲ ಹೆಮ್ಮಚ್ಚಿಮನೆ ಸುಧೀರ್ ಮಾದಮ್ಮಯ್ಯ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯ ಸಮಾರೋಪ ಸಮಾರಂಭ ಮೇ 3ರಂದು ಮಧ್ಯಾಹ್ನ 2 ಗಂಟೆಗೆ ಬಾನಂಡ ಎನ್.ಪ್ರತ್ಯು ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಕ್ರೀಡಾ ಸಮಿತಿ ಕಾರ್ಯದರ್ಶಿ ಬಾನಂಡ ಸೂದನ್, ಖಜಾಂಚಿ ಬಾನಂಡ ಪ್ರಕಾಶ್, ಸಂಚಾಲಕ ಬಾನಂಡ ಕೃಷ್ಣರಾಜ್, ನಿರ್ದೇಶಕ ನರಿಯಂಡಮ್ಮಂಡ ಜನಾರ್ದನ್ ಉಪಸ್ಥಿತರಿದ್ದರು.