ಒಂದು ಲೀಟರ್ ಒಳಗೊಂಡoತೆ ಅದಕ್ಕಿಂತ ಕಡಿಮೆ ಪ್ರಮಾಣದ ನೀರಿನ ಪ್ಲಾಸ್ಟಿಕ್ ಬಾಟಲುಗಳನ್ನು ಕೊಡಗಿನಲ್ಲಿ ನಿಷೇಧಿಸಲಾಗಿದೆ.
- 1 ಲೀ. ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ಬಾಟಲಿಗೆ ನಿಷೇಧ
- ಚರ್ಚೆಗೆ ಕಾರಣವಾದ ಜಿಲ್ಲಾಡಳಿತದ ಆದೇಶ
- ಪರಿಣಾಮಕಾರಿ ಜಾರಿಗೆ ಒತ್ತಾಯ
ಕೊಡಗಿನಲ್ಲಿ 1 ಲೀ. ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ನೀರಿನ ಬಾಟಲಿಗಳ ನಿಷೇಧ ವಿಷಯ ಈಗ ಚರ್ಚೆಗೆ ಕಾರಣವಾಗಿದೆ. ಪರ್ಯಾಯ ವ್ಯವಸ್ಥೆ ಮಾಡದೇ ಇಂಥ ನಿರ್ಧಾರ ತೆಗೆದುಕೊಂಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಒಂದು ಕಡೆಯಾದರೆ, ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ನೀರಿನ ಬಾಟಲಿ ಮಾತ್ರವಲ್ಲದೆ ಎಲ್ಲಾ ರೀತಿಯ ಬಾಟಲಿಗಳ ಬಳಕೆಗೂ ಕಡಿವಾಣ ಹಾಕಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಪರಿಸರ ಹಾಳಾಗುವಲ್ಲಿ ಪ್ಲಾಸ್ಟಿಕ್ ಕೊಡುಗೆ ದೊಡ್ಡದು. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಮತ್ತು ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಮತ್ತು ದೀರ್ಘವಾಧಿಯಲ್ಲಿ ಪರಿಸರಕ್ಕೆ ಹಾನಿ ಮತ್ತು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಮರು ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಮಾಡುವುದನ್ನು ರಾಜ್ಯ ಸರ್ಕಾರ ಈಗಾಗಲೇ ನಿಷೇಧಿಸಿದೆ. ಕೊಡಗಿನಲ್ಲೂ ಈ ನಿಷೇಧ ಜಾರಿಯಲ್ಲಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಈ ಮಧ್ಯೆ 1 ಲೀ. ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ನೀರಿನ ಬಾಟಲಿಗಳ ನಿಷೇಧದ ಕತೆಯೂ ಇದೇ ದಾರಿಯಲ್ಲಿದೆ.
ಕುಶಾಲನಗರ ಪುರಸಭೆಯಿಂದಲೂ 1ಲೀ ಮತ್ತು ಅದಕ್ಕಿಂತ ಚಿಕ್ಕದಾದ ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ಮತ್ತು ಬಳಕೆ ನಿಷೇಧಿಸಿ ಆದೇಶ ಮಾಡಲಾಗಿದೆ. ಆದರೆ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಮನವಿ ಮೇರೆಗೆ ಸಂಗ್ರಹವಾಗಿರುವ ಈ ಬಗೆಯ ಬಾಟಲಿಗಳ ಮಾರಾಟಕ್ಕೆ ಈ ತಿಂಗಳ 30ರ ತನಕ ಅವಕಾಶ ಕೊಡಲಾಗಿದೆ. ನಂತರವೂ ಬಳಕೆ ಕಂಡು ಬಂದರೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ಇದರ ಜತೆಗೆ ಪ್ಲಾಸ್ಟಿಕ್‌ಗೆ ಪರ್ಯಾ ವಸ್ತುಗಳ ಬಳಕೆ, ಪ್ರವಾಸಿಗರು ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ತರಲು ಮತ್ತು ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಸೂಕ್ತ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.
ಪರಿಸರ ಮಾಲಿನ್ಯ ಮತ್ತು ತ್ಯಾಜ್ಯ ಸಂಗ್ರಹದಲ್ಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್‌ಗಳ ಕೊಡುಗೆ ದೊಡ್ಡದಿದೆ. ಎಲ್ಲೆಂದರಲ್ಲಿ ಎಸೆಯುವ ಇಂಥ ಬಾಟಲಿಗಳು ಮಳೆಗಾಲದ ಸಂದರ್ಭ ಚರಂಡಿಗಳಲ್ಲಿ ಸಿಲುಕಿಕೊಂಡು ಆಗುವ ಅವಾಂತರಗಳೂ ಒಂದೆರಡಲ್ಲ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸುರಿದ ಮಳೆ ಸಂದರ್ಭ ಈ ರೀತಿ ಚರಂಡಿ ಕಟ್ಟಿಕೊಂಡು ನೀರೆಲ್ಲಾ ಹರಿದು ಬಂದು ಸ್ಥಳೀಯ ಕಲ್ಯಾಣಮಂಟಪವೊAದರ ತುಂಬೆಲ್ಲಾ ಕೊಳಚೆ ನೀರು ತುಂಬಿಕೊAಡು ಮದುವೆ ಸಮಾರಂಭವೇ ಹಾಳಾಗಿಹೋಗಿತ್ತು. ಹಾಗಾಗಿ 1ಲೀ ಮತ್ತು ಅದಕ್ಕಿಂತ ಚಿಕ್ಕದಾದ ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ಮತ್ತು ಬಳಕೆ ನಿಷೇಧಕ್ಕೆ ಪರಿಸರಪ್ರಿಯರು ಸೇರಿದಂತೆ ಒಂದು ದೊಡ್ಡ ವರ್ಗದಿಂದ ವ್ಯಾಪಕ ಬೆಂಬಲ ವ್ಯಕ್ತ ಆಗುತ್ತಿದೆ.
ಮತ್ತೊಂದು ಕಡೆ ಪ್ಲಾಸ್ಟಿಕ್ ಬಾಟಲ್‌ಗಳನ್ನು ನಿಷೇಧಿಸಿ ಹೊರಡಿಸಿರುವ ಆದೇಶ ಸಂಪೂರ್ಣವಾಗಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ. ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧದಿಂದ ಜನಸಾಮಾನ್ಯರು ಮತ್ತು ವರ್ತಕರು ತೊಂದರೆ ಅನುಭವಿಸುವಂತಾಗಿದೆ. ಪ್ರವಾಸಿಗರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಅಗತ್ಯವಾಗಿದೆ. ಈ ನಿಷೇಧದಿಂದಾಗಿ ಎಲ್ಲರಿಗೂ ತೊಂದರೆ ಆಗಿದೆ ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗುತ್ತಿದೆ.
ಆರೋಗ್ಯಕ್ಕೆ ಹಾನಿಕಾರಕವೆಂದು ವೈಜ್ಞಾನಿಕವಾಗಿ ಸಾಬೀತಾಗಿರುವ ತಂಪು ಪಾನೀಯಗಳು ಅದೇ ಪ್ಲಾಸ್ಟಿಕ್ ಬಾಟಲಿಯಲ್ಲಿ ನಿರ್ಬಂಧವಿಲ್ಲದೆ ಮಾರಾಟವಾಗುತ್ತಿದೆ. ಇದಕ್ಕೆ ಯಾವುದೇ ನಿಷೇಧ ಇಲ್ಲ. ಆದರೆ, ಮಾನವನ ಜೀವಕ್ಕೆ ಅಗತ್ಯವಾದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ನಿಷೇಧಿಸಿರುವುದು ಮಲತಾಯಿ ಧೋರಣೆ ಆಗಿದೆ ಎನ್ನುವವರು ಇದ್ದಾರೆ. ಪರಿಸರ ಸಂರಕ್ಷಣೆಯ ಮಹತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಪ್ಲಾಸ್ಟಿಕ್ ಬಳಕೆ ನಿಯಂತ್ರಣದ ಉದ್ದೇಶಕ್ಕೆ ಬೆಂಬಲ ಸಿಗುತ್ತಿದೆ. ಆದರೆ ಮಡಿಕೇರಿ, ಕುಶಾಲನಗರ ಭಾಗಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳ ನಿಷೇಧಕ್ಕೆ ಸಂಬAಧಿಸಿದ ಆದೇಶ ಕಾನೂನು, ತರ್ಕ ಹಾಗೂ ಮಾನವೀಯತೆಯ ಮಾನದಂಡಗಳಿಗೆ ವಿರುದ್ಧವಾಗಿ ಎಂದೂ ವಾದಿಸಲಾಗುತ್ತಿದೆ.
ಅ. 2ರಿಂದ ಒಂದು ಲೀಟರ್ ಒಳಗೊಂಡAತೆ ಅದಕ್ಕಿಂತ ಕಡಿಮೆ ಪ್ರಮಾಣದ ನೀರಿನ ಪ್ಲಾಸ್ಟಿಕ್ ಬಾಟಲುಗಳನ್ನು ನಿಷೇಧಿಸಲಾಗಿದೆ. ಆದರೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮನವಿಯ ಮೇರೆಗೆ ಈಗಾಗಲೇ ದಾಸ್ತಾನಿರುವ ಬಾಟಲುಗಳನ್ನು ಶೂನ್ಯಗೊಳಿಸಲು ಜ. 30ರವರೆಗೆ ದಂಡ ವಿಧಿಸುವುದಿಲ್ಲ. ಆದರೆ ಆ ಅವಧಿಯ ನಂತರ ಈ ಅವಕಾಶ ಇರುವುದಿಲ್ಲ.
ಒಂದು ಲೀಟರ್ ಮತ್ತು ಅರ್ಧ ಲೀಟರ್ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸುವುದಾದರೆ ನಗರಗಳಲ್ಲಿ ತಾರತಮ್ಯ ಮಾಡದೆ ಇಡೀ ಜಿಲ್ಲೆಯಲ್ಲಿ ನಿಷೇಧವನ್ನು ಜಾರಿಗೊಳಿಸಿ. ಕೇವಲ ನೀರಿನ ಬಾಟಲ್‌ಗಳ ಮೇಲೆ ಮಾತ್ರ ಕಣ್ಣಿಡದೆ ಉಳಿದ ಎಲ್ಲಾ ರೀತಿಯ ದ್ರವಗಳಿರುವ ಬಾಟಲುಗಳ ಮೇಲೂ ಈ ನಿಯಮ ಅನ್ವಯಿಸಬೇಕು. ಈ ನಿಷೇಧದಿಂದ ಕಿರು ವ್ಯಾಪಾರಿಗಳು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.
ಎಲ್ಲ ಪ್ರಮಾಣದ ಪ್ಲಾಸ್ಟಿಕ್ ಬಾಟಲುಗಳಿಗೂ ಏಕರೂಪದ ನಿಯಮ ರೂಪಿಸಿ, ಹಂತ ಹಂತವಾಗಿ ಅವುಗಳನ್ನು ನಿಷೇಧಿಸಬೇಕಾಗಿದೆ. ಆದರೆ ಈ ರೀತಿಯ ನಿಷೇಧವನ್ನು ಕಾರ್ಯರೂಪಕ್ಕೆ ತರುವಲ್ಲಿ ಆಡಳಿತ ವ್ಯವಸ್ಥೆ ವಿಫಲಗೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಅಗತ್ಯವಿದ್ದು ಅದನ್ನು ನಿರ್ವಹಿಸುವಲ್ಲಿಯೂ ವ್ಯವಸ್ಥೆ ಸೋತಿದೆ.
ಕುಶಾಲನಗರದಲ್ಲಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪುನರ್ ಪರಿಶೀಲನೆಗೆ ಒಳಪಡಿಸುವುದು ಉತ್ತಮ. ಸಾರ್ವಜನಿಕರಿಗೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಏರ್ಪಡಿಸಿದ ನಂತರವಷ್ಟೇ ಯಾವುದೇ ನಿರ್ಬಂಧ ಹೇರುವುದು ಸೂಕ್ತ. ಮಾರುಕಟ್ಟೆಯಲ್ಲಿ ಕಾಣಸಿಗುವ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಾಟಲಿಗಳಿಗೆ ಭೇದರಹಿತವಗಿ ನಿಯಮ ಜಾರಿಗೊಳಿಸಬೇಕಾಗಿದೆ. ಸಾರ್ವಜನಿಕ ಅಭಿಪ್ರಾಯ ಪಡೆದು ವೈಜ್ಞಾನಿಕ ತಳಹದಿಯ ಮೇಲೆ ಕಾನೂನು ಸಲಹೆಯೊಂದಿಗೆ ಪ್ಲಾಸ್ಟಿಕ್ ನೀತಿ ರೂಪಿಸುವ ಅಗತ್ಯವಿದೆ.