ಭಾಗಮಂಡಲದಲ್ಲಿ ಮಂಡಲ ಪೂಜೆ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಂಡಿದ್ದರು. 
ಕೊಡಗು

ಅಯ್ಯಪ್ಪಸ್ವಾಮಿ ಮಂಡಲ ಪೂಜೆ

ಮಡಿಕೇರಿ:
ಭಾಗಮಂಡಲದಲ್ಲಿ 43ನೇ ವರ್ಷದ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ ಕಾರ್ಯಕ್ರಮ ಈಚೆಗೆ ಶ್ರದ್ಧಾಭಕ್ತಿಯಿಂದ ನಡೆಯಿತು. ವರ್ಷಂಪ್ರತಿ ಆಚರಿಸಕೊಂಡು ಬರುತ್ತಿರುವ ಮಾದರಿಯಲ್ಲಿ ನಡೆದ ಅದ್ದೂರಿ ಪೂಜಾ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಊರಿನ ಭಕ್ತರು ಸಾಕ್ಷಿಯಾದರು. ಗುರುಸ್ವಾಮಿಗಳಾದ ಸಿ.ಆರ್. ಜಯನ್ ಮತ್ತು ಎಚ್.ಎಸ್. ವಸಂತ್ ನೇತೃತ್ವದಲ್ಲಿ ಬೆಳಗ್ಗೆ ಭಾಗಮಂಡಲದ ತಲಕಾವೇರಿ ರಸ್ತೆಯ ಬದಿಯಲ್ಲಿರುವ ಶ್ರೀ ಅಯ್ಯಪ್ಪ ಬನದಲ್ಲಿ ಪೂಜೆ ಪ್ರಾರಂಭಿಸಿ ನಂತರ ಸಿಂಗಾರಿ ಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಶೋಭಾ ಯಾತ್ರೆ ಭಾಗಮಂಡಲದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ವಿಜೃಂಭಣೆಯಿAದ ಮಂಡಲ ಪೂಜಾ ನೆರವೇರಿತು.
ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಪ್ರಸಾದ ವಿತರಣೆ ಮತ್ತು ಅನ್ನದಾನ ಸ್ವೀಕರಿಸಿದರು. ಮಂಡಲ ಪೂಜೆಯಲ್ಲಿ ನೂರಾರು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಭಾಗವಹಿಸಿದ್ದರು. ಭಾಗಮಂಡಲ, ಕರಿಕೆ ಅಯ್ಯಂಗೇರಿ, ದೊಡ್ಡಪುಲಿಕೋಟು, ನಾಪೋಕ್ಲು, ಬೆಟ್ಟಗೇರಿ, ಚೇರಂಬಾಣೆ ಅಕ್ಕಪಕ್ಕದ ಊರುಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.