ತೆರಾಲು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಶುಭ ಅವರು ಕಾರ್ಮಿಕ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದರು. ಎಂ.ಎಂ.ಯತ್ನಟ್ಟಿ, ಎಂ.ಸಿ.ಮಾದಪ್ಪ, ಶೀರಾರ್ ಅಹಮದ್ ಇತರರಿದ್ದರು. 
ಕೊಡಗು

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ
  • ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ನ್ಯಾಯಾಧೀಶೆ ಶುಭ
ಮಡಿಕೇರಿ: ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತರಾಗಿ, ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಕರೆ ನೀಡಿದರು.
ಪೊನ್ನಂಪೇಟೆ ತಾಲ್ಲೂಕಿನ ತೆರಾಲು, ಬಿರುನಾಣಿ, ಮರೆನಾಡು ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ಕಾರ್ಮಿಕರಿಗಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮಗಳಿವೆ. ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ದನ್ ಯೋಜನೆ, ಇ-ಶ್ರಮ್ ಸ್ಮಾರ್ಟ್ ಕಾರ್ಡ್, ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಅಪಘಾತ ಪರಿಹಾರ ಸೌಲಭ್ಯಗಳಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ. ೫ನೇ ಮತ್ತು ೬ನೇ ತರಗತಿಯಿಂದ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯ ಸೌಲಭ್ಯವಿದೆ. ಇವುಗಳನ್ನು ಬಳಸಿಕೊಂಡು ಶಿಕ್ಷಣಕ್ಕೆ ಒತ್ತು ನೀಡಬೇಕು. ಯಾವುದೇ ಕಾರಣಕ್ಕೂ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಆದಿವಾಸಿಗಳು ಇತರರಂತೆ ಬದುಕು ಕಟ್ಟಿಕೊಳ್ಳಬೇಕು. ರಾಷ್ಟ್ರದ ಅಭಿವೃದ್ಧಿ ಎಂದರೆ ಪ್ರತಿಯೊಬ್ಬರಿಗೂ ಕನಿಷ್ಠ ಸೌಲಭ್ಯ ತಲುಪಬೇಕು. ಪ್ರತಿಯೊಬ್ಬರೂ ಬದಲಾದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ತೆರಾಲು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಮಿಕ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದ ಅವರು, ಮರೆನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಶಾಲೆ ಬಿಟ್ಟಿರುವ ಮಕ್ಕಳಿದ್ದಲ್ಲಿ ಹತ್ತಿರದ ಶಾಲೆ ಅಥವಾ ವಸತಿ ನಿಲಯಕ್ಕೆ ಸೇರಿಸಬೇಕು ಎಂದು ಮನವಿ ಮಾಡಿದರು.
ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು. ಎಲ್ಲರಿಗೂ ಗೌರವಯುತ ಬದುಕುವ ಅವಕಾಶವಿದೆ. ಅದನ್ನು ಉಲ್ಲಂಘಿಸಿದರೆ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಕಾರ್ಮಿಕರು ಆರೋಗ್ಯಕರ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಮಿಕ ಇಲಾಖೆಯ ಅಧಿಕಾರಿ ಎಂ.ಎಂ.ಯತ್ನಟ್ಟಿ ಮಾತನಾಡಿ, ಕಾರ್ಮಿಕ ಕಾಯ್ದೆಯಡಿ ಅಸಂಘಟಿತ ಕಾರ್ಮಿಕರಿಗೆ ಹಲವು ಪರಿಹಾರ ಸೌಲಭ್ಯಗಳಿವೆ. ಕಟ್ಟಡ ಕಾರ್ಮಿಕರ ಯೋಜನೆಯಡಿ ೧೩,೬೩೬, ಇ-ಶ್ರಮ್ ಯೋಜನೆಯಡಿ ೬೯,೭೯೮, ದಿನಪತ್ರಿಕೆ ವಿತರಕರ ಯೋಜನೆಯಡಿ ೪೮, ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ೫೬, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ದನ್ ಯೋಜನೆಯಡಿ ೧,೪೮೩, ಅಂಬೇಡ್ಕರ್ ಸಹಾಯಹಸ್ತ ಯೋಜನೆಯಡಿ ೪,೫೧೪ ಹಾಗೂ ಖಾಸಗಿ ವಾಣಿಜ್ಯ ಚಾಲಕರ ವಿಮಾ ಯೋಜನೆಯಡಿ ೧,೧೦೮ ಮಂದಿ ಸ್ಮಾರ್ಟ್ ಕಾರ್ಡ್ ಪಡೆದಿದ್ದಾರೆ ಎಂದು ತಿಳಿಸಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಮಕ್ಕಳಿಗಿರುವ ಸರ್ಕಾರಿ ಸೌಲಭ್ಯಗಳ ಬಗ್ಗೆಯೂ ವಿವರಿಸಿದ ಅವರು, ಸ್ಮಾರ್ಟ್ ಕಾರ್ಡ್ ವಿತರಣೆ ಆನ್‌ಲೈನ್ ಮೂಲಕ ನಿರಂತರವಾಗಿ ನಡೆಯುತ್ತಿದ್ದು, ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಸಿ.ಮಾದಪ್ಪ, ಯೋಜನಾ ನಿರ್ದೇಶಕ ಆರ್.ಶೀರಾರ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಜೆ.ಆರ್.ತುಳಸಿ, ಇನ್ಸ್‌ಪೆಕ್ಟರ್ ಸುಮತಿ, ಬಿ.ಎಸ್.ಶಿವರುದ್ರ, ರಾಜೇಶ್, ಕೌಶಲ್ಯ, ಶಿಕ್ಷಕರು, ಆಡಳಿತ ಸಹಾಯಕ ಜಯಪ್ಪ ಮತ್ತಿತರರು ಇದ್ದರು.