ಚೆಯ್ಯಂಡಾಣೆ ವ್ಯಾಪ್ತಿಯ ಚೇಲಾವರ ಫಾಲ್ಸ್ ಹಾಗೂ ಕಬ್ಬೆ ಬೆಟ್ಟ ಪ್ರದೇಶದಲ್ಲಿ ಜಿಲ್ಲಾ ಅಕ್ಕಪಡೆ ಸಿಬ್ಬಂದಿ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಿದರು.
ಸಿದ್ದಾಪುರ: ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲಾ ಅಕ್ಕಪಡೆ ಸಿಬ್ಬಂದಿ ಚೆಯ್ಯಂಡಾಣೆ ವ್ಯಾಪ್ತಿಯ ಚೇಲಾವರ ಫಾಲ್ಸ್ ಹಾಗೂ ಕಬ್ಬೆ ಬೆಟ್ಟ ಪ್ರದೇಶದಲ್ಲಿ ಸೋಮವಾರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ಕುರಿತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಿದರು.
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಬಾರದು ಹಾಗೂ ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಅಲ್ಲದೆ, ಅಪಾಯಕಾರಿ ಸ್ಥಳಗಳಲ್ಲಿ ಹಾಗೂ ಅನಾವಶ್ಯಕವಾಗಿ ನೀರಿಗೆ ಇಳಿಯುವುದನ್ನು ತಪ್ಪಿಸಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಜಿಲ್ಲಾಡಳಿತದ ಸಹಾಯವಾಣಿ ಹಾಗೂ ತುರ್ತು ಸೇವೆಗಳ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯುವಂತೆ ಪ್ರವಾಸಿಗರಿಗೆ ಮಾಹಿತಿ ನೀಡಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಅಕ್ಕಪಡೆ ಸಿಬ್ಬಂದಿ ಮನವಿ ಮಾಡಿದರು.