ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಳಿಗೆ ಯೋಗ ಕ್ಷೇತ್ರದಲ್ಲಿ ಲಭಿಸಿರುವ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆಯನ್ನು ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬುಧವಾರ ಆಯೋಜಿತ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಜಿ.ಆರ್.ರವಿಶಂಕರ್, ಮಹೇಶ್ ಕುಮಾರ್, ಪಿ.ಆರ್.ರಾಜೇಶ್ ಇತರರಿದ್ದರು.
- ಯುವಯೋಗ ಸಾಧಕಿ ಸಿಂಚನಾಳಿಗೆ ಪ್ರಶಸ್ತಿ ಪ್ರದಾನ
ಮಡಿಕೇರಿ: ಮದೆನಾಡಿನ ಯುವ ಯೋಗಸಾಧಕಿ ಸಿಂಚನಾಳಿಗೆ ಯೋಗ ಕ್ಷೇತ್ರದಲ್ಲಿ ಲಭಿಸಿರುವ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆಯನ್ನು ನಗರದ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಬುಧವಾರ ಆಯೋಜಿತ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ನಗರದ ರೋಟರಿ ಆಯೋಜಿತ ಕಾರ್ಯಕ್ರಮದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ ಸಿಂಚನಾಳಿಗೆ ದೊರೆತ ಪ್ರತಿಷ್ಟಿತ ಪ್ರಶಸ್ತಿಗಳನ್ನು ಗಣ್ಯರು ಹಸ್ತಾಂತರಿಸಿದರು. ಕಳೆದ ೩ ತಿಂಗಳಿನಲ್ಲಿ ತನ್ನ ಯೋಗಾಸನಕ್ಕಾಗಿ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾಳಿಗೆ ಏಷ್ಯಾ ಬುಕ್ ಆಫ್ ರೆಕಾಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗಳು ಲಭಿಸಿದ್ದವು. ಈ ಪ್ರಶಸ್ತಿಗಳನ್ನ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾರ್ಯಕ್ರಮದಲ್ಲಿ ಸಿಂಚನಾಳಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯೋಗಭ್ಯಾಸಿ, ವಕೀಲ ಜಿ.ಆರ್.ರವಿಶಂಕರ್, ಯೋಗ ಎಂದರೆ ಕೇವಲ ದೇಹವನ್ನು ಬಗ್ಗಿಸುವುದ ಅಥವಾ ಕಷ್ಟಕರವಾದ ಆಸನಗಳನ್ನು ಮಾಡುವುದೋ ಅಲ್ಲ, ಯೋಗ ಎಂದರೆ ಒಗ್ಗೂಡುವಿಕೆಯಾಗಿದೆ. ನಮ್ಮ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ತರುವುದೇ ಯೋಗದ ಉದ್ದೇಶವಾಗಿದೆ ಎಂದರು.
ಇಂದಿನ ಧಾವಂತದ ಕಾಲದಲ್ಲಿ ಮಾನಸಿಕ ಒತ್ತಡ, ಆತಂಕ ಮತ್ತು ದೈಹಿಕ ಅನಾರೋಗ್ಯ ಹೆಚ್ಚುತ್ತಿದ್ದು, ಯೋಗದಿಂದ ಶಾಂತಿ, ಆರೋಗ್ಯ ಲಭಿಸುತ್ತದೆ. ಇದು ಆರೋಗ್ಯ ಸಂರಕ್ಷಣೆಗೆ ಪ್ರಕತ್ತಿಯೇ ನೀಡಿದ ದಿವ್ಯಾಷಧವಾಗಿದೆ ಎಂದು ರವಿಶಂಕರ್ ಹೇಳಿದರು.
ಲಕ್ಷಾಂತರ ರುಪಾಯಿ ವೆಚ್ಚ ಮಾಡಿದರೂ ದೊರಕದ ಆರೋಗ್ಯ ಭಾಗ್ಯ, ಯೋಗದಿಂದ ಸುಲಭವಾಗಿ ದೊರಕುತ್ತದೆ. ಅಂತರರಾಷ್ಟ್ರೀಯ ಯೋಗದಿನದಂದು ಮಾತ್ರ ಯೋಗ ಪ್ರದರ್ಶನಕ್ಕೆ ಸೀಮಿತವಾಗದೇ ಯೋಗವನ್ನು ದೈನದಿಂನ ಅಭ್ಯಾಸವಾಗಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.
ಮಡಿಕೇರಿಯ ಯೋಗಗುರು ಕೆ.ಕೆ.ಮಹೇಶ್ ಕುಮಾರ್ ಮಾತನಾಡಿ, ಸಿಂಚನಾಳ ಸಾಧನೆ ಶ್ಲಾಘನೀಯವಾಗಿದ್ದು, ಈಕೆಯ ಯೋಗಸಿದ್ಧಿ ಜಿಲ್ಲೆಯಲ್ಲಿಯೇ ಗಮನಾರ್ಹವಾಗಿದೆ ಎಂದರು. ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳ ಜೀವನ ಪದ್ದತಿಯೇ ಯೋಗವಾಗಿತ್ತು. ಹಿಂದಿನ ಕಾಲದವರು ಯೋಗಭ್ಯಾಸದಲ್ಲಿ ನಿರತರಾಗಿದ್ದ ಕಾರಣದಿಂದಾಗಿಯೇ ಆ ಕಾಲದವರಿಗೆ ಈಗಿನವರಂತೆ ರೋಗರುಜಿನಗಳು ಬರುತ್ತಿರಲಿಲ್ಲ ಎಂದೂ ಅವರು ಅಭಿಪ್ರಾಯಪಟ್ಟರು.
ಯೋಗಪಟು ಸಿಂಚನಾ ಮಾತನಾಡಿ, ಸೆ.೨೫ ರಂದು ಶುಕ್ರವಾರ ದೇವರಕೊಲ್ಲಿಯ ಶ್ರೀಚಾಮುಂಡೇಶ್ವರಿ ದೇವಾಲಯಯದಲ್ಲಿ ಮತ್ತೆ ೩ ವಿಶ್ವದಾಖಲೆಯ ಯೋಗ ಪ್ರದರ್ಶನಕ್ಕೆ ಸಿದ್ದಳಾಗುತ್ತಿರುವುದಾಗಿ ಮಾಹಿತಿ ನೀಡಿದಳು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಮಾತನಾಡಿ, ಸಿಂಚನಾಳ ಯೋಗಸಾಧನೆ ದಾಖಲಾರ್ಹ. ರೋಟರಿ ಮಿಸ್ಟಿ ಹಿಲ್ಸ್ ಈಕೆಯ ಯೋಗಸಾಧನೆಗೆ ಸದಾ ಬೆಂಬಲವಾಗಿರಲಿದೆ ಎಂದು ಭರವಸೆ ನೀಡಿದರು.
ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಚೇತನ್‌ಜಿ.ಡಿ, ಮಿಸ್ಟಿ ಹಿಲ್ಸ್ ನಿರ್ದೇಶಕ ಪ್ರಸಾದ್ ಗೌಡ, ಸಿಂಚನಾಳ ತಾಯಿ ರೇಣುಕಾ ಕೀರ್ತಿ, ಸಿಂಚನಾಳ ತಂದೆ ಕೀರ್ತಕುಮಾರ್, ಮದೆಕಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ.ಧನಂಜಯ್, ಸಾಹಿತಿ ಬಿ.ಆರ್.ಜೋಯಪ್ಪ ಇತರರಿದ್ದರು. ಇದೇ ವೇಳೆ ಸಿಂಚನಾಳಿಂದ ಆಕರ್ಷಕ ಯೋಗ ಪ್ರದರ್ಶನ ಸರ್ವರ ಮನಸೆಳೆಯಿತು.