ಸೋಮವಾರಪೇಟೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಮುಸುಕುಧಾರಿಗಳಿಬ್ಬರು ಯತ್ನಿಸಿರುವುದು.
ಸೋಮವಾರಪೇಟೆ: ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಕೇಂದ್ರದಲ್ಲಿ ಕಳ್ಳತನ ಮಾಡಲು ಮುಸುಕುಧಾರಿಗಳಿಬ್ಬರು ಯತ್ನಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 2.05ರ ವೇಳೆಗೆ ಕಾರಿನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಎಟಿಎಂ ಕೇಂದ್ರದೊಳಗೆ ಪ್ರವೇಶಿಸಿದ್ದಾರೆ. ಸಣ್ಣ ಕಬ್ಬಿಣದ ಸಲಾಕೆ ಬಳಸಿ ಎಟಿಎಂ ಯಂತ್ರದ ಮೇಲ್ಭಾಗದ ಕವಚವನ್ನು ಮೀಟಿ ಕಳಚಿದ್ದಾರೆ. ಬಳಿಕ ಮತ್ತೊಂದು ಪದರವನ್ನು ಕಳಚುವ ಪ್ರಯತ್ನದಲ್ಲಿದ್ದಾಗ ಹೊರಗಡೆ ಯಾರೋ ಬಂದಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎಟಿಎಂ ಒಡೆಯಲು ಕಳ್ಳರು ನಡೆಸಿದ ಪ್ರಯತ್ನದ ದೃಶ್ಯಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕಳ್ಳರು ಬಳಸಿದ್ದ ಕಾರು ಹಾಗೂ ಅವರ ಚಲನವಲನಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಮನೆ ಕಳ್ಳತನದ ಬೆನ್ನಲ್ಲೇ ಎಟಿಎಂಗೆ ಕನ್ನ
ಇದಕ್ಕೂ ಸುಮಾರು 15 ದಿನಗಳ ಹಿಂದೆ ಪಟ್ಟಣದ ಬಾಣಾವರ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಮನೆಯವರು ಬೆಂಗಳೂರಿಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಮನೆಯ ಹಿಂಬಾಗಿಲಿನ ಬೀಗ ಒಡೆದು ಒಳನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ ಪದಾರ್ಥವನ್ನು ಕದ್ದಿದ್ದರು.
ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.