ವಿರಾಜಪೇಟೆ ಕಾವೇರಿ ಕಾಲೇಜು ಮತ್ತು ಒತ್ತೋರ್ಮೆರ ಕೊಡವ ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಆಟ್-ಪಾಟ್ ಪದ್ಧತಿ ಪಡಿಪು ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕುಪ್ಪಂಡ ಜಿ.ವೀಣಾ, ಕಾಳಮಂಡ ರಾಬಿನ್, ಕಾಳೆಂಗಡ ದಮಯಂತಿ ಮತ್ತಿತರರು ಇದ್ದರು.
ವಿರಾಜಪೇಟೆ ಕಾವೇರಿ ಕಾಲೇಜು ಮತ್ತು ಒತ್ತೋರ್ಮೆರ ಕೊಡವ ಕೂಟದ ಸಹಯೋಗದಲ್ಲಿ ಆಟ್-ಪಾಟ್ ಪದ್ಧತಿ ಪಡಿಪು ಶಿಬಿರ ಮಂಗಳವಾರ ಕಾವೇರಿ ಕಾಲೇಜಿನಲ್ಲಿ ಪ್ರಾರಂಭಗೊಂಡಿತು.
ವಿದ್ಯಾರ್ಥಿಗಳಿಗಾಗಿ ಕೊಡವರ ಪ್ರಮುಖ ನೃತ್ಯಗಳಾದ ಕೋಲಾಟ್, ಕತ್ತಿಯಾಟ್, ಬೋಲ್ಕಾಟ್, ಉಮ್ಮಾತ್ತಾಟ್ ಮತ್ತು ಕೊಡವ ಪದ್ಧತಿಯ ಬಗ್ಗೆ ತರಬೇತಿಯನ್ನು ಒತ್ತೋರ್ಮೆರ ಕೊಡವ ಕೂಟದ ಸ್ಥಾಪಕ ಅಧ್ಯಕ್ಷ ಚೆಟ್ಟೋಳಿರ ಶರತ್ ಸೋಮಣ್ಣ ನೇತೃತ್ವದಲ್ಲಿ ಕೂಟದ ಸದಸ್ಯರು ನೀಡಲಿದ್ದಾರೆ.
ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಕುಪ್ಪಂಡ ಜಿ.ವೀಣಾ, ವಿದ್ಯಾರ್ಥಿಗಳಿಗೆ ಸಂಸ್ಕೃತಿ, ಆಚಾರಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ತರಬೇತಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕೂಟದ ಉಪಾಧ್ಯಕ್ಷೆ ಮಾತಾಂಡ ಖುಷಿ ಉನ್ನತಿ ಮಾತನಾಡಿ, ಉಮ್ಮತ್ತಾಟ್ ಕೊಡವರ ನೃತ್ಯಗಳಲ್ಲಿ ಒಂದಾಗಿದೆ. ಇದನ್ನು ಕಲಿತು ಇನ್ನೊಬ್ಬರಿಗೆ ಕಲಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಸಲಹೆ ನೀಡಿದರು.
ಕೊಡವ ಕೂಟದ ಖಜಾಂಚಿ ಕಾಳಮಂಡ ರಾಬಿನ್ ಮಾತನಾಡಿ, ಯಾವುದೇ ಜನಾಂಗದ ಸಂಸ್ಕೃತಿ ಪದ್ಧತಿ, ಆಚಾರ-ವಿಚಾರವನ್ನು ತಿಳಿದುಕೊಂಡು ಆಚರಿಸುವುದು ಉತ್ತಮ ಎಂದ ಅವರು, ಕೊಡವರ ಉಡುಪು ವೈತ್ರ (ಚೆಕ್‌ವಸ್ತ್ರ) ಕಟ್ಟುವ ಕ್ರಮ ಹಾಗೂ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿಕೊಟ್ಟರು.
ಕೊಡವ ಕೂಟದ ಕಾರ್ಯದರ್ಶಿ ಮಾಚಂಗಡ ಸಚಿನ್ ತಿಮ್ಮಯ್ಯ, ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕುಲಚಂಡ ಪಿ.ಬೋಪಣ್ಣ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಕಾಳೆಂಗಡ ದಮಯಂತಿ, ಒತ್ತೋರ್ಮೆರ ಕೊಡವ ಕೂಟದ ಸಹ ಕಾರ್ಯದರ್ಶಿ ಅಳ್ಳಂಡ ಸಹನ ಚೋಂದಮ್ಮ, ನಿರ್ದೇಶಕರಾದ ಮಾಚಂಗಡ ಭೂಮಿಕಾ, ಚೈಯ್ಯಂಡ ಕೀರ್ತನ್ ಅಯ್ಯಪ್ಪ, ಪೊನ್ನೋಲತಂಡ ಶರಣು ತಮ್ಮಯ್ಯ, ಪದವಿ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ಅಮ್ಮಂಡ ಅನುಪಮ ತಿಮ್ಮಯ್ಯ, ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ಸಂಚಾಲಕಿ ಆಲೆಮಾಡ ಗಾಯತ್ರಿ ತಿಮ್ಮಯ್ಯ, ಶಿಬಿರಾರ್ಥಿಗಳು ಇದ್ದರು.