ಕೊಡವ ಮಕ್ಕಡ ಕೂಟದ ೧೨೭ನೇ ಪುಸ್ತಕ ಆಟ್ ಪಾಟ್ ಪಡಿಪುವಿನ ಏಳನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಡಾ.ಅವನಿಜ ಸೋಮಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ವೀಣಾ ಅಚ್ಚಯ್ಯ ಇತರರಿದ್ದರು.
- ಆಟ್-ಪಾಟ್ ಪಡಿಪು ಪುಸ್ತಕ ಲೋಕಾರ್ಪಣೆ
ಮಡಿಕೇರಿ: ಕೊಡವ ಮಕ್ಕಡ ಕೂಟದ ೧೨೭ನೇ ಪುಸ್ತಕ ಆಟ್ ಪಾಟ್ ಪಡಿಪುವಿನ ಏಳನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ನಗರದ ಹಳೆಯ ಖಾಸಗಿ ನಿಲ್ದಾಣದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸಾಹಿತಿ ಬೊಜ್ಜಂಗಡ ಡಾ.ಅವನಿಜ ಸೋಮಯ್ಯ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಕೊಡವ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ ಇಡೀ ವಿಶ್ವದಲ್ಲೇ ವಿಶಿಷ್ಟವಾಗಿದೆ. ಈ ಅಪರೂಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ. ಆಟ್ ಪಾಟ್ ಪಡಿಪು ಅತ್ಯಂತ ಉಪಯುಕ್ತ ಪುಸ್ತಕವಾಗಿದ್ದು, ಇದನ್ನು ಮಕ್ಕಳಿಗೆ ನೀಡಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಾ ಬಂದಿರುವ ಕೊಡವ ಮಕ್ಕಡ ಕೂಟದ ಸಾಹಿತ್ಯ ಕೃಷಿ ಮುಂದುವರಿಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು, ಕೂಟವು ಕಳೆದ ೧೩ ವರ್ಷಗಳಿಂದ ಸಾಮಾಜಿಕ ಕಳಕಳಿಯೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದೆ. ದಾನಿಗಳಾದ ಆಪಾಡಂಡ ಯಮುನಾ ತಿಮ್ಮಯ್ಯ ಹಾಗೂ ಚೆಕ್ಕೇರ ಪ್ರಮೋದ್ ಅವರ ಸಹಕಾರದಿಂದ ರಚನೆಗೊಂಡಿರುವ ಆಟ್ ಪಾಟ್ ಪಡಿಪು ಪುಸ್ತಕದ ಏಳನೇ ಆವೃತ್ತಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಮಕ್ಕಳಿಗೆ ಕೊಡವ ಸಂಸ್ಕೃತಿಯನ್ನು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಪುಸ್ತಕವನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಾಪೋಕ್ಲು ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಮಾಜ ಸೇವಕ ಅಜ್ಜಮಾಡ ಎನ್.ಬೆಳ್ಯಪ್ಪ, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ.ಬಿ, ಕೊಡಗು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಪ್ರೊ.ಮೇಚಿರ ರವಿಶಂಕರ್ ನಾಣಯ್ಯ, ಸಮಾಜ ಸೇವಕ ಅಜ್ಜಮಾಡ ಬೆಳ್ಯಪ್ಪ, ಆರ್ಮಿ ಕ್ಯಾಂಟೀನ್ ವ್ಯವಸ್ಥಾಪಕ ಲೆಫ್ಟಿನೆಂಟ್ ಕರ್ನಲ್ ಮುಲ್ಲೇರ ಕಾವೇರಪ್ಪ, ಸ್ಚೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ಮತ್ತಿತರರು ಉಪಸ್ಥಿತರಿದ್ದರು.