ತೋಟಗಳಿಗೆ ತೆರಳುತ್ತಿರುವ ಅಸ್ಸಾಂ ಕಾರ್ಮಿಕರ ತಂಡ
- ಕೊಡಗಿನಲ್ಲಿ 15 ಸಾವಿರ ಅಸ್ಸಾಂ ಕಾರ್ಮಿಕರು
- ಕೆಲಸ ಅರಸಿ ಬರುತ್ತಿರುವ ಕಾರ್ಮಿಕರು
- ಕಾಫಿ ತೋಟಗಳಲ್ಲಿ ನೆಲೆಯಾಗಿರುವ ಅಸ್ಸಾಂ ಕಾರ್ಮಿಕರು
ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ವಲಸೆ ಕಾರ್ಮಿಕರ ಸಂಖ್ಯೆ ಏರುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಪ್ರಮುಖ ಆರ್ಥಿಕತೆಯ ಮೂಲವಾಗಿರುವ ಕಾಫಿ ಕೃಷಿಗೆ ಹೆಚ್ಚಿನ ಕಾರ್ಮಿಕರ ಅಗತ್ಯವಿದ್ದು ಕೆಲಸ ಅರಸಿ ಬರುವವರು ಜಾಸ್ತಿ ಆಗುತ್ತಿದ್ದಾರೆ. ಅದರಲ್ಲೂ ಅಸ್ಸಾಂ ಮೂಲದ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 15 ಸಾವಿರ ಮಂದಿ ಅಸ್ಸಾಂ ಕಾರ್ಮಿಕರು ಕೊಡಗಿನಲ್ಲಿ ಇದ್ದಾರೆ. ಇತರ ಕಾಫಿ ಬೆಳೆಯುವ ಜಿಲ್ಲೆಗಳಿಗೆ ಹೋಲಿಸಿದರೆ ಈ ಸಂಖ್ಯೆ ಮೂರು ಪಟ್ಟು ಅಧಿಕವಾಗಿದೆ.
ಆಕರ್ಷಕ ತೋಟದ ಬೆಳೆಯಾಗಿ ಕಂಡುಬರುವ ಕಾಫಿ ಕೃಷಿ ಅಷ್ಟು ಸುಲಭವೇನಲ್ಲ. ಇದು ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಮಿಕರನ್ನು ಬಯಸುವ ಕೃಷಿಯಾಗಿದೆ. ಸಾಮಾನ್ಯವಾಗಿ ಎಲ್ಲಾ ಕೃಷಿ ಚಟುವಟಿಕೆಗಳಲ್ಲೂ ಯಂತ್ರಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು ಕೃಷಿಯಲ್ಲಿನ ಯಾಂತ್ರೀಕರಣದಿAದಾಗಿ ರೈತರ ಶ್ರಮ, ಪ್ರಾಣಿಗಳ ಮೇಲಿನ ಅವಲಂಬನೆ ಬಹುತೇಕ ಕಡಿಮೆ ಆಗಿದೆ. ಆದರೆ ಕಾಫಿ ಕೃಷಿಯ ಕತೆ ವಿಭಿನ್ನವಾಗಿದೆ. ಇಲ್ಲಿ ಕೌಶಲ್ಯ ಹೊಂದಿದ ನುರಿತ ಕಾರ್ಮಿಕರ ಅವಲಂಬನೆ ಅನಿವಾರ್ಯವಾಗಿದೆ. ಅದರಲ್ಲೂ ಕಾಫಿ ಕೊಯ್ಲು ಸಂದರ್ಭ ಎಷ್ಟು ಕಾರ್ಮಿಕರಿದ್ದರೂ ಕಡಿಮೆಯೇ. ಹಾಗಾಗಿಯೇ ಜಿಲ್ಲೆಯ ಶೇ.51ರಷ್ಟು ಉದ್ಯೋಗ ಕಾಫಿ ವಲಯದಲ್ಲೇ ಸೃಷ್ಟಿಯಾಗಿದೆ.
ಕಾಫಿ ತೋಟಗಳಲ್ಲಿ ಅದರಲ್ಲೂ ಅರೆಬಿಕಾ ತಳಿಯ ಕಾಫಿ ಬೆಳೆಯುವಲ್ಲಿ ವರ್ಷದ ಎಲ್ಲಾ ದಿನಗಳಲ್ಲೂ ಕಾರ್ಮಿಕರಿಗೆ ಒಂದಿಲ್ಲೊAದು ಕೆಲಸ ಇದ್ದೇ ಇರುತ್ತದೆ. 1 ಅಥವಾ 2 ಎಕರೆ ಒಳಗಿನ ಸಣ್ಣ ಹಿಡುವಳಿ ಹೊಂದಿರುವ ಕಾಫಿ ತೋಟದ ಮಾಲೀಕರು ಉಳಿದೆಲ್ಲಾ ಕೆಲಸಗಳನ್ನು ತಾವೇ ಮಾಡಿಕೊಂಡರೂ ಕಾಫಿ ಕೊಯ್ಲು ಕಾರ್ಯಕ್ಕೆ ಕಾರ್ಮಿಕರು ಬೇಕೇ ಬೇಕು. ಎಲ್ಲಾ ಕಡೆಯಲ್ಲೂ ಒಮ್ಮೆಗೆ ಕಾಫಿ ಹಣ್ಣಾಗುವುದರಿಂದ ಆದಷ್ಟು ಬೇಗ ಕೊಯ್ಲು ಮಾಡುವ ಅನಿವಾರ್ಯತೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ಇಂಥ ಸಂದರ್ಭದಲ್ಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತದೆ.
ಕೊಡಗಿನಲ್ಲಿ ಕಾರ್ಮಿಕರಿಗೆ ಇರುವ ಬೇಡಿಕೆಯಿಂದಾಗಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅದರಲ್ಲೂ ಅಸ್ಸಾಂ ಮೂಲದ ಕಾರ್ಮಿಕರು ಎಲ್ಲಾ ಕಡೆಯಲ್ಲಿ ಹರಡಿ ಹೋಗಿದ್ದಾರೆ. ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪಲು, ನಾಪೋಕ್ಲು, ಸಿದ್ದಾಪುರ, ಮಾದಾಪುರ, ಕುಟ್ಟ ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಒಂದು ಸುತ್ತು ಹಾಕಿದರೆ ಸ್ಥಳೀಯವಲ್ಲದ ಹೊಸ ಮುಖಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದು ಸಾಮಾನ್ಯ ಎಂಬAತಾಗಿದೆ. ಪ್ರಶ್ನಿಸಿದರೆ ತಾವು ಅಸ್ಸಾಂ ಮೂಲದವರು ಎಂದು ಹೇಳಿಕೊಳ್ಳುತ್ತಾರೆ.
ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅAಶಗಳ ಪ್ರಕಾರ ಕೊಡಗಿನಲ್ಲಿ 15,177 ಜನ ಅಸ್ಸಾಂ ಕಾರ್ಮಿರು ಇರುವುದಾಗಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಎಂದರೆ 3,350 ಜನ ಅಸ್ಸಾಂ ಕಾರ್ಮಿರು ಇರುವುದು ಕಂಡು ಬಂದಿದೆ. ನಂತರದ ಸ್ಥಾನ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯದ್ದಾಗಿದ್ದು ಇಲ್ಲಿ 3,126 ಮಂದಿ ಅಸ್ಸಾಂನವರು ಇದ್ದಾರೆ. ಉಳಿದಂತೆ ಶನಿವಾರಸಂತೆ 600, ಸೋಮವಾರಪೇಟೆ 1,240, ಕುಶಾಲನಗರ ಗ್ರಾಮಾಂತರ 478, ಕುಶಾಲನಗರ ಟೌನ್ 88, ಸುಂಟಿಕೊಪ್ಪ 285, ಭಾಗಮಂಡಲ 782, ನಾಪೋಕ್ಲು 2,542, ಮಡಿಕೇರಿ ಟೌನ್ 58, ಕುಟ್ಟ 702, ಶ್ರೀಮಂಗಲ 182, ಪೊನ್ನಂಪೇಟೆ 440, ವಿರಾಜಪೇಟೆ ಟೌನ್ 268, ವಿರಾಜಪೇಟೆ ಗ್ರಾಮಾಂತರ 743 ಹಾಗೂ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 293 ಅಸ್ಸಾಂ ಕಾರ್ಮಿರು ಇರುವುದಾಗಿ ದಾಖಲೆಗಳಲ್ಲಿದೆ. ದಾಖಲೆಗಳು ಇಲ್ಲದೇ ನೆಲೆಸಿರುವ ಕಾರ್ಮಿಕರೂ ಇದ್ದಾರೆ.
ರಾಜ್ಯದಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲೂ ಕಾಫಿ ಬೆಳೆಯಲಾಗುತ್ತದೆ. 2023-24ನೇ ಸಾಲಿಗೆ ಸಂಬAಧಿಸಿದAತೆ ಭಾರತೀಯ ಕಾಫಿ ಮಂಡಳಿ ಮಾಹಿತಿ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ 99,600 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟವಿದ್ದರೆ, ಹಾಸನ ಜಿಲ್ಲೆಯಲ್ಲಿ 41,621 ಹೆಕ್ಟೇರ್ ಜಾಗದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಕೊಡಗಿನಲ್ಲಿ 1,07,463 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ತೋಟ ಹರಡಿದೆ. ಸರ್ಕಾರದ ಮಾಹಿತಿಯಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 4,729 ಮಂದಿ ಅಸ್ಸಾಂನ ಕಾರ್ಮಿಕರು ಇದ್ದರೆ, ಹಾಸನ ಜಿಲ್ಲೆಯಲ್ಲಿ 2,207 ಜನ ಅಸ್ಸಾಂ ಕಾರ್ಮಿರು ಇರುವ ಬಗ್ಗೆ ದಾಖಲೆಗಳಿದೆ. ಕಾಫಿ ಬೆಳೆಯುವ ಈ ಎರಡೂ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಮೂರು ಪಟ್ಟುಗೂ ಅಧಿಕ ಸಂಖ್ಯೆಯಲ್ಲಿ ಅಸ್ಸಾಂ ಕಾರ್ಮಿರು ನೆಲೆಯಾಗಿದ್ದಾರೆ.
ಕೊಡಗಿನ ಕಡೆಗೆ ಅಸ್ಸಾಂ ಕಾರ್ಮಿಕರು ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರಲು ಆರಂಭಿಸಿ ಬಹಳ ಕಾಲವೇನೂ ಆಗಿಲ್ಲ. 2010ರ ತನಕವೂ ಸ್ಥಳೀಯ ಕಾರ್ಮಿಕರು ಕಾಫಿ ತೋಟಗಳಿಗೆ ಲಭ್ಯವಾಗುತ್ತಿದ್ದರು. ದೊಡ್ಡ ಹಿಡುವಳಿದಾರರು ತಮ್ಮ ತೋಟದಲ್ಲೇ ಮನೆಗಳನ್ನು ಕೊಟ್ಟು ಕಾರ್ಮಿಕರನ್ನು ಕಾಯಂ ಆಗಿ ಇಟ್ಟುಕೊಳ್ಳುವ ವ್ಯವಸ್ಥೆಯೂ ಇತ್ತು. ನಂತರದ ದಿನಗಳಲ್ಲಿ ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದಿಂದ ಕಾರ್ಮಿಕರು ಇಲ್ಲಿಗೆ ಬರಲಾರಂಭಿಸಿದರು. ಕಾಫಿ ಕೊಯ್ಲು ಸಮಯದಲ್ಲಷ್ಟೇ ಕುಟುಂಬ ಸಮೇತ ಆಗಮಿಸುತ್ತಿದ್ದ ಇವರು ತಮ್ಮ ಕೆಲಸ ಮುಗಿದ ನಂತರ ಊರಿಗೆ ಮರಳುತ್ತಿದ್ದರು.
ಸುಮಾರು 10-15 ವರ್ಷಗಳ ಕಾಲ ಇದೇ ಪರಿಸ್ಥಿತಿ ಇತ್ತು. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಉತ್ತರ ಭಾರತ, ಈಶಾನ್ಯ ಭಾರತದಿಂದ ಇಲ್ಲಿಗೆ ಕಾರ್ಮಿಕರು ಬರಲಾರಂಭಿಸಿದರು. ಅದರಲ್ಲೂ ಬಹುತೇಕ ಅಸ್ಸಾಂ ಮೂಲದ ಕಾರ್ಮಿಕರೇ ಇಲ್ಲಿ ಬಂದು ಜಮಾವಣೆ ಆಗುತ್ತಿದ್ದಾರೆ. ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಕಾಫಿ ಕೊಯ್ಲು ಕೆಲಸ ಮುಗಿದ ನಂತರ ತಮ್ಮ ಊರಿಗೆ ವಾಪಸ್ ಹೋಗುತ್ತಿದ್ದರೆ, ಅಸ್ಸಾಂ ಮೂಲದ ಕಾರ್ಮಿಕರು ಇಲ್ಲಿಯೇ ನೆಲೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಪಾವಧಿಯಲ್ಲೇ ದಾಖಲೆಗಳ ಪ್ರಕಾರ 15 ಸಾವಿರದಷ್ಟು ಸಂಖ್ಯೆಯಲ್ಲಿ ಅಸ್ಸಾಂ ಕಾರ್ಮಿಕರು ಕೊಡಗಿಗೆ ಬಂದು ಸೇರಿಕೊಂಡಿದ್ದು, ಅನಧಿಕೃತವಾಗಿ ಇನ್ನೆಷ್ಟು ಮಂದಿ ಇರಬಹುದು ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಅಸ್ಸಾಂ ಕಾರ್ಮಿಕರಲ್ಲಿ ಬಾಂಗ್ಲಾದ ನುಸುಳುಕೋರರು ಇರುವ ಶಂಕೆಯೂ ಸ್ಥಳೀಯರಲ್ಲಿ ದಟ್ಟವಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲೂ ಅಸ್ಸಾಂ ಕಾರ್ಮಿಕರ ಹೆಸರು ಕಾಣಿಸಿಕೊಳ್ಳುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತೂರು-ಮೂರ್ನಾಡು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸರಬರಾಜು ಪ್ರಕರಣಕ್ಕೆ ಸಂಬAಧಿಸಿದAತೆ ಭಾನುವಾರ (ಜ.4) ಮೂವರು ಅಸ್ಸಾಂ ಕಾರ್ಮಿರನ್ನು ಬಂಧಿಸಿರುವುದು ಇದಕ್ಕೆ ತಾಜಾ ಉದಾಹರಣೆ ಆಗಿದೆ. ತೋಟವೊಂದರ ಲೈನ್‌ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು ಅಸ್ಸಾಂನ ಧರಾಂಗ್ ಜಿಲ್ಲೆಯ ಅಜೀಮ್ ಆಲಿ (19), ಸೈಫುಲ್ ಇಸ್ಲಾಂ (31) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಬಾಲಕನನ್ನು ಬಂಧಿಸಿ 1.420 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಸರ್ಕಾರದ ಮಾಹಿತಿ ಪ್ರಕಾರ ಈ ಹಿಂದೆಯೂ 2024ರಲ್ಲಿ 21 ಕಾರ್ಮಿಕರ ವಿರುದ್ಧ 11 ಪ್ರಕರಣಗಳು ಮತ್ತು 2025ರಲ್ಲಿ 83 ಕಾರ್ಮಿಕರ ವಿರುದ್ಧ 37 ಬೇರೆ ಬೇರೆ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಾಫಿ ತೋಟಗಳಲ್ಲಿ ಕೂಲಿ ಕೆಲಸಗಾರರಾಗಿ ಬಂದಿರುವ ಅಸ್ಸಾಂ ರಾಜ್ಯದವರ ಸಂಪೂರ್ಣ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ನೀಡುವಂತೆ ತೊಟದ ಮಾಲೀಕರ ಸಭೆ ಕರೆದು ಸೂಚಿಸಲಾಗಿದೆ. ಇಂಥ ಮಾಹಿತಿಗಳನ್ನು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ರಿಜಿಸ್ಟರ್ ತೆಗೆದು ನಿರ್ವಹಿಸಲಾಗುತ್ತಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಸ್ವಂತ ವಿಳಾಸ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವಂತೆಯೂ ಸೂಚಿಸಲಾಗಿದೆ.