ರೋಟರಿಯ 121 ನೇ ದಿನಾಚರಣೆ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಯುಕ್ತಾಶ್ರಯದಲ್ಲಿ 22 ಮಂದಿ ವಿಶೇಷ ಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿತ್ತು. ನಾಗೇಂದ್ರ ಪ್ರಸಾದ್, ಯಶಸ್ವಿ ಸೋಮಶೇಖರ್, ವಿಮಲ, ರತ್ನಾಕರ್ ರೈ, ಬಿ.ಕೆ. ಕಾರ್ಯಪ್ಪ ಮತ್ತಿತರರು ಇದ್ದರು. 
ಕೊಡಗು

22 ವಿಶೇಷ ಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣೆ

ಮಡಿಕೇರಿ:
ಭಾರತದಲ್ಲಿ ಉತ್ತಮ ಉದ್ದೇಶಕ್ಕಾಗಿ ದಾನ ನೀಡುವವರ ಸಂಖ್ಯೆ ಕಡಮೆಯಾಗಿಲ್ಲ. ಆದರೆ ಈ ರೀತಿ ನೀಡಿದ ದಾನ ಸೂಕ್ತವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವ ಕರ್ತವ್ಯ ದಾನ ಸ್ವೀಕರಿಸಿದವರ ಮೇಲಿದೆ ಎಂದು ಬೆಂಗಳೂರಿನ ಪೀಣ್ಯ ರೋಟರಿ ಸಂಸ್ಥೆಯ ಪ್ರಮುಖ ಮಾಜಿ ಪ್ರಾಂತಪಾಲ ನಾಗೇಂದ್ರ ಪ್ರಸಾದ್ ಹೇಳಿದರು. ನಗರದ ರೋಟರಿ ಸಭಾಂಗಣದಲ್ಲಿ ರೋಟರಿಯ 121 ನೇ ದಿನಾಚರಣೆ ಸಂದರ್ಭದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಯುಕ್ತಾಶ್ರಯದಲ್ಲಿ 22 ಮಂದಿ ವಿಶೇಷ ಚೇತನರಿಗೆ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಭಾರತದಲ್ಲಿ ಕೊಡುಗೈ ದಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ದಾನಿಗಳು ತಾವು ಶ್ರಮಪಟ್ಟು ಗಳಿಸಿದ ಸಂಪಾದನೆಯನ್ನು ದಾನವಾಗಿ ನೀಡಿದ ಸಂದರ್ಭ ಆ ಹಣ ಎಷ್ಟರ ಮಟ್ಟಿಗೆ ಉತ್ತಮ ಕಾರ್ಯಗಳಿಗೆ ವಿನಿಯೋಗಿಸಲ್ಪಡುತ್ತದೆ ಎಂಬುದನ್ನು ಗಮನಿಸುತ್ತಾರೆ. ಹೀಗಾಗಿ ಲಭಿಸಿದ ಕೊಡುಗೆಯನ್ನು ಸಮರ್ಪಕವಾಗಿ ಬಳಕೆ ಮಾಡುವುದು ದಾನ ಪಡೆದ ವ್ಯಕ್ತಿಗಳಿಂದ ಆಗಬೇಕಾಗಿದೆ. ಸಮಾಜದಲ್ಲಿ ಉತ್ತಮ ಕಾರ್ಯಗಳಿಗೆ ನೀಡಲ್ಪಡುವ ದಾನದಿಂದ ದಾನಿಗಳ ಮನಸ್ಸಿಗೂ ತೃಪ್ತಿ ದೊರಕುತ್ತದೆ. ಸಮಾಜದಿಂದ ಪಡೆದ ಆಸ್ತಿಯಲ್ಲಿ ಕೆಲವು ಪಾಲನ್ನಾದರೂ ಸಮಾಜಕ್ಕೆ ಮರಳಿ ನೀಡುವುದು ಪ್ರತೀಯೋರ್ವರ ಕರ್ತವ್ಯವಾಗಬೇಕು. ಪೀಣ್ಯ ರೋಟರಿ ಸಂಸ್ಥೆ ಮೂಲಕ 22 ವರ್ಷಗಳಿಂದ ಕೃತಕ ಕಾಲು, ಕೈ ಜೋಡಣಾ ಶಿಬಿರ ಆಯೋಜಿಸಲ್ಪಡುತ್ತಿದ್ದು, ಪ್ರತೀ ವರ್ಷ 10 ದಿನ ಆಯೋಜಿತ ಶಿಬಿರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ 2,500 ಜನರಿಗೆ ಕೃತಕ ಕೈ, ಕಾಲು ಜೋಡಣೆ ಮಾಡಲಾಗುತ್ತಿದೆ ಎಂದರು.
ರೋಟರಿ ಜಿಲ್ಲೆ 3181ನ ಚುನಾಯಿತ ಪ್ರಾಂತಪಾಲ ಯಶಸ್ವಿ ಸೋಮಶೇಖರ್ ಮಾತನಾಡಿ, ರೋಟರಿಯ ಈ ವರ್ಷದ ಧ್ಯೇಯವಾಕ್ಯವಾದ ಒಳಿತಿಗಾಗಿ ಒಂದಾಗೋಣ ಎಂಬAತೆ ರೋಟರಿ ಸದಸ್ಯರೆಲ್ಲರೂ ಸಮಾಜಕ್ಕೆ ಒಳಿತುಂಟುಮಾಡುವ ಉದ್ದೇಶದಿಂದ ಒಂದಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖಾಧಿಕಾರಿ ವಿಮಲ ಮಾತನಾಡಿ ಸಮಾಜದ ಜನತೆ, ದುರ್ಬಲರು, ಅಸಹಾಯಕರನ್ನು ಗುರುತಿಸಿ ಅವರ ಸೇವೆಗೆ ಮುಂದಾಗುವ ರೋಟರಿಯಂಥ ಸೇವಾ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದೆ. ಕೃತಕ ಕಾಲು, ಕೈ ಪಡೆದ ನಂತರ ಫಲಾನುಭವಿಗಳು ಹೊಸ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ. ಅನೇಕರ ಪರಿಶ್ರಮದಿಂದಾಗಿ ತಾವು ಪಡೆದಿರುವ ಸಾಧನ ಸಲಕರಣೆಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ರೋಟರಿ ವಲಯ 6 ರ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ, ಯೋಜನೆಯ ಸಂಚಾಲಕ ಡಾ. ಚೆರಿಯಮನೆ ಪ್ರಶಾಂತ್, ದಾನಿಗಳಾದ ಶ್ರೀಹರಿ, ಅಂಬೆಕಲ್ ವಿನೋದ್, ಪ್ರಮೋದ್ ಕುಮಾರ್ ರೈ, ಪ್ರಸಾದ್ ಗೌಡ, ರತ್ನಾಕರ್ ರೈ, ಜಿ.ಆರ್. ರವಿಶಂಕರ್, ಅಶೋಕ್ ಪಿ.ವಿ. ಇದ್ದರು.
ಕೃತಕ ಕೈ, ಕಾಲು ಉತ್ಪಾದನೆಯ ಮೈಸೂರಿನ ಪುನಶ್ಚೇತನ ಸಂಸ್ಥೆಯ ಸುಂದರೇಶ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ರೈಲು ಹತ್ತುವ ಸಂದರ್ಭ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಮಾಯಮುಡಿ ಗ್ರಾಮದ ಮೋಹನ್ ಕೃತಕ ಕಾಲು ಪಡೆದವರ ಪೈಕಿ ಒಬ್ಬರಾಗಿದ್ದು, ಈ ಸಂದರ್ಭ ಮಾತನಾಡಿದ ಅವರು ಆಗಸದಲ್ಲಿ ಸ್ವಚ್ಚಂದವಾಗಿ ಹಾರಾಡುತ್ತಿರುವ ಹಕ್ಕಿಗೆ ರೆಕ್ಕೆಯೊಂದು ಇಲ್ಲದೇ ಆದಾಗ ಅದು ಅನುಭವಿಸುವ ಯಾತನೆಯಂತೆ ನಾವೂ ಕೂಡ ಕಾಲು ಕಳೆದುಕೊಂಡು ಪಾಡು ಪಟ್ಟೆವು. ಇದೀಗ ಕೃತಕ ಕಾಲು ದೊರಕಿದ್ದು ಹಕ್ಕಿಗೆ ಮತ್ತೆ ರೆಕ್ಕೆ ದೊರಕಿದಷ್ಟೇ ಸಂತೋಷವಾಗಿದೆ. ಮನುಷ್ಯನಿಗೆ ಅಂಗಾAಗ ಇಲ್ಲದೇ ಹೋದಾಗ ಆತನಿಗೆ ಆಗುವ ಸಂಕಟ ಅನುಭವಿಸಿದವರಿಗೆ ಗೊತ್ತು ಎಂದು ಹೇಳಿದರು. ಚೆಟ್ಟಿಮಾನಿ ಗ್ರಾಮದ 76 ವರ್ಷದ ಮಾಜಿ ಸೈನಿಕ ಈಶ್ವರ ಮಾತನಾಡಿ, ನನಗೆ ಕಳೆದುಹೋಗಿದ್ದ ಎರಡನೇ ಕಾಲು ದೊರಕಿದ್ದು ಎರಡನೇ ಜೀವ ಪಡೆದಂತಾಗಿದೆ. ಕಾಲುಕಳೆದುಕೊಂಡ ಸಂದರ್ಭ ನಮಗೆ ಯಾರೂ ಇಲ್ಲ ಎಂಬ ನೋವು ಇದ್ದಾಗ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯವರು ಕೃತಕ ಕಾಲಿನ ಮೂಲಕ ಮತ್ತೆ ಆತ್ಮಸ್ಥೆರ್ಯ ತಂದಿದ್ದಾರೆ ಎಂದರು.