ಬೋರ್ಡೊ ದ್ರಾವಣ ತಯಾರಿಯ ಹಂತ  
ಕೊಡಗು

ಮಳೆಗಾಲಕ್ಕೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯ

ಮಡಿಕೇರಿ:
ಕೊಡಗಿನ ಬಹುತೇಕ ಕಡೆಗಳಲ್ಲಿ ಮುಂಗಾರಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲವೆಡೆ ಮಳೆ ಬೀಳುತ್ತಿದೆ. ಈ ಬೆನ್ನಲ್ಲೇ ಮಳೆಗಾಲದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಶಿಲೀಂದ್ರ ರೋಗಗಳು ಕಾಣಿಸಿಕೊಳ್ಳುವ ಆತಂಕವಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಪ್ರಮುಖವಾಗಿ ಬೋರ್ಡೋ ದ್ರಾವಣ ಸಿಂಪಡಿಸಲಾಗುತ್ತದೆ. ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ‍್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪುö್ಪಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪಡಣೆ ಮಾಡಿದಲ್ಲಿ ಎಲೆಗಳು ಸುಡುವ ಸಾಧ್ಯತೆಗಳಿವೆ. ಹಾಗಾಗಿ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣ ತಯಾರಿಸಿ ಸಿಂಪಡಣೆ ಕೈಗೂಳ್ಳುವುದು ಅವಶ್ಯಕ ಎನ್ನುತ್ತಾರೆ ತಜ್ಞರು.
ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತ್ತ, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡಿ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟ ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.
ಮೈಲುತುತತ್ತ ಅಂದರೆ ಶುದ್ದ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ಧವಾಗಿ ಕೆಲಸ ಮಡುತ್ತದೆ. ಘನ ಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲು ಆಗುವುದಿಲ್ಲ.
ಹಾಗಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣ ಸೇರಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಇದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಗಲೂ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ.
ಬೋರ್ಡೊ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು÷ ಹತೋಟಿ ಮಾಡಬಹುದು. ಈ
ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿAದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು. ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು. ಸಿಂಪಡಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುಷ್ಪರಿಣಾವiಗಳು ತುಂಬಾ ಕಡಿಮೆ ಎನ್ನುವುದು ತಜ್ಞರ ಅಭಿಪ್ರಾಯ.
ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು 1 ಕೆ.ಜಿ. ಮೈಲುತುತ್ತ, 1 ಕೆ.ಜಿ. ಸುಣ್ಣ, 100 ಲೀಟರ್ ನೀರು, ಸ್ವಚ್ಛವಾದ ಕಬ್ಬಿಣದ ತುಂಡು , ಚಾಕು ಅಥವಾ ಪಿ.ಹೆಚ್.ಪೇಪರ್, 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್ 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್ ಅಥವಾ ಬ್ಯಾರಲ್
ಬೇಕಾಗುತ್ತದೆ.
ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‌ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‌ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ sಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ.
ಕೆಲವು ಸಂಧರ್ಭದಲ್ಲಿ ಉತ್ತಮ ಗುಣಮಟ್ಟದ ಸುಣ್ಣವನ್ನು ಉಪಯೋಗಿಸಿದರೆ 100 ಲೀಟರ್ ದ್ರಾವಣಕ್ಕೆ 500 ಗ್ರಾಂ ಸುಣ್ಣ ಸಾಕಾಗುತ್ತದೆ. ಆದರೆ ಸುಣ್ಣದ ಪ್ರಮಾಣವನ್ನು ರಸಸಾರ ಪರೀಕ್ಷೆ ಮಾಡುತ್ತ ಸುರಿಯಬೇಕು. ಅಂದಾಜಿನ ಮೂಲಕ ಸುಣ್ಣ ಸುರಿಯಬಾದು. ಸರಿಯಾದ ಶೇ. 1 ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.
ತಯಾರು ಮಾಡಿದ ಮಿಶ್ರಣ ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು ಅಥವಾ ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುÄಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು ಅಥವಾ ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪರಣೆಗೆ ಸೂಕ್ತ ಎಂದು ತಿಳಿಯಬಹುದು.
ಕೆಂಪು ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕೆಂಪು ಬಣ್ಣದ ಲಿಟ್‌ಮಸ್ ಕಾಗದ ನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯಬಹುದು. ಬೋರ್ಡೊ ದ್ರಾವಣದ ರಸಸಾರ 8 ರಿಂದ 10 ಇರುವ ಹಾಗೆ ನೋಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣು, ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
"

ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು. ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು. ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪೆçà ಸುಣ್ಣವನ್ನು ಉಪಯೋಗಿಸಬೇಕು. ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು. ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ರೈತರು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಉತ್ತಮ ರೀತಿಯಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದಾಗಿದೆ. ಡಾ. ಕೆ.ವಿ. ವೀರೇಂದ್ರಕುಮಾರ್, ಸಸ್ಯ ಸಂರಕ್ಷಣಾ ತಜ್ಞ,

— ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು